ಕಲಬುರಗಿ: ಸಾಮಾನ್ಯವಾಗಿ ಜನರು ಕೋತಿಗಳನ್ನು ಕಂಡ್ರೆ ಭಯ ಬಿದ್ದು ಮೈಲಿ ದೂರ ಓಡಿ ಹೋಗುತ್ತಾರೆ. ಹಾಗೆಯೇ ಮಂಗಗಳು ಸಹ ಮನುಷ್ಯರನ್ನು ಕಂಡರೆ ಹೆದರುತ್ತವೆ. ಆದರೆ ಇಲ್ಲೊಂದು ಮಂಗ ಮನೆಯ ಸದಸ್ಯರೊಂದಿಗೆ ಹಾಗೂ ಊರಿನವರೊಂದಿಗೂ ಅತ್ಯಂತ ಸಲುಗೆಯಿಂದ ಇದ್ದು ಸ್ನೇಹದಿಂದ ಬಾಳುತ್ತಿದೆ.
ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದ ಶರಣಗೌಡ ಮಾಲಿ ಪಾಟೀಲ್ ಎಂಬುವರ ಆರೈಕೆಯಲ್ಲಿರುವ ಮಂಗವೊಂದು ಹಾಯಾಗಿದೆ. ಹಲವು ದಿನಗಳ ಹಿಂದೆ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದ ಕೋತಿಗಳ ಹಿಂಡಿನಲ್ಲಿ ಬಂದಿದ್ದ ಮರಿಮಂಗನಿಗೆ ಆ ವೇಳೆ ಗಾಯವಾಗಿತ್ತು. ಆಗ ಕೋತಿಮರಿಯನ್ನು ಮಂಗಗಳ ಹಿಂಡು ಇಲ್ಲಿಯೇ ಬಿಟ್ಟು ಹೋಗಿದ್ದವು.
ಆ ವೇಳೆ ಕೋತಿಮರಿಗೆ ಶರಣಗೌಡ ಮಾಲಿಪಾಟೀಲ್ ಚಿಕಿತ್ಸೆ ನೀಡಿ ಆಶ್ರಯ ನೀಡಿದ್ದರು. ಅಂದು ಪ್ರಾಣಾಪಾಯದಿಂದ ಪಾರಾದ ಮಂಗ ಇದೀಗ ಮನೆಯ ಸದಸ್ಯನಾಗಿದೆ. ಮನೆಯವರ ಪ್ರತಿಯೊಂದು ದೈನಂದಿನ ಕೆಲಸಗಳಿಗೆ ಸಾಥ್ ಕೊಡುವುದಲ್ಲದೆ, ಗ್ರಾಮಸ್ಥರೊಂದಿಗೂ ಸಹ ಸ್ನೇಹಜೀವಿಯಾಗಿ ಬದುಕುತ್ತಿದೆ. ಅಷ್ಟೇಅಲ್ಲದೆ, ಈ ಮಂಗಕ್ಕೆ ಮನುಷ್ಯರಂತೆ ಪ್ಲೇಟ್‌ನಲ್ಲೇ ಊಟ ಬೇಕು, ಅನ್ನ ಸಾಂಬಾರ್ ಅಂದ್ರೆ ಇದಕ್ಕೆ ಪಂಚಪ್ರಾಣವಂತೆ.
ಒಟ್ಟಿನಲ್ಲಿ ಈ ಕೋತಿ ಮನುಷ್ಯರೊಂದಿಗೆ ಅತ್ಯಂತ ಸಲುಗೆಯಿಂದ ಯಾರಿಗೂ ತೊಂದರೆ ಕೊಡದೆ ಸ್ನೇಹಜೀವಿಯಾಗಿ ಗ್ರಾಮದಲ್ಲಿ ಬದುಕುತ್ತಿದೆ. ಊರ ಜನರು ಕೂಡ ಈ ಮಂಗನನ್ನು ದೈವ ಸ್ವರೂಪಿ ಎಂದು ನಂಬಿದ್ದಾರೆ.