ಕಲಬುರಗಿ : ಜನರು ತಿರಸ್ಕಾರ ಮಾಡಿದರೂ ಕಾಂಗ್ರೆಸ್ ನಾಯಕರಿಗೆ ಬುದ್ಧಿ ಬಂದಿಲ್ಲ. ಕತ್ತಲೆ ಕೋಣೆಯಲ್ಲಿ ಇಲ್ಲದಿರುವ ಸಿಎಂ ಕುರ್ಚಿಯನ್ನು ಹುಡುಕುವ ಕೆಲಸ ಕಾಂಗ್ರೆಸ್ನವರು ಮಾಡುತ್ತಿದ್ದಾರೆ ಅಂತಾ ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಪರಿಸ್ಥಿತಿ ಹೀನಾಯವಾಗಿದೆ. ಜನ ತಿರಸ್ಕಾರ ಮಾಡಿದ್ರೂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್ ಸೇರಿ ಕಾಂಗ್ರೆಸ್ನ ಐದು ಜನ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಹಿಂದೆ ಪಂಚಪಾಂಡವರು ಇದ್ದರು. ಈ ಕಾಂಗ್ರೆಸ್ನವರು ಪಂಚ ಕೌರವರು ಎಂದು ಕುಟುಕಿದರು.
ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡೋರು ಇವರು ಅಂತಾ ಜನ ತಿರಸ್ಕಾರ ಮಾಡಿದ್ದಾರೆ. ಇಷ್ಟಾದರೂ ಬುದ್ಧಿ ಬಂದಿಲ್ಲ. ಹಿಂಬಾಲಕರಿಂದ ಸಿಎಂ ಎಂದು ಕೂಗಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಯಲ್ಲಿ ತಾಳ ಇಲ್ಲ, ತಂತ್ರನೂ ಇರಲ್ಲ. ಅವರ ಸ್ಥಿತಿ ಹೇಳಬಾರದಂತಾಗಿದೆ ಎಂದು ಟಾಂಗ್ ಕೊಟ್ಟರು.
ಯಾವುದೇ ಶೀತಲ ಸಮರ ಇಲ್ಲ..
ಸಿಎಂ ಯಡಿಯೂರಪ್ಪ ನನ್ನ ಮಧ್ಯೆ ಯಾವುದೇ ಶೀತಲ ಸಮರ ಇಲ್ಲ. ನಾನು ರಾಜ್ಯಪಾಲರನ್ನು ಭೇಟಿ ಮಾಡಿದ್ದು ನಿಜ. ಶಾಸಕರಿಗೆ ಆರ್ಥಿಕ ಇಲಾಖೆ ಮೂಲಕ 1200 ಕೋಟಿ ಹೋಗಿತ್ತು. ಇದು ಒಳ್ಳೆದಲ್ಲ ಅಂತಾ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದೇನೆ. 1200 ಕೋಟಿ ನಮ್ಮ ಇಲಾಖೆಗೆ ಕೊಡಲಿಲ್ಲ. ನೇರವಾಗಿ ಶಾಸಕರಿಗೆ ಹೋಗಿದೆ. ಇದಕ್ಕೆ ಅವಕಾಶ ಇದೆಯೇ ಎಂದು ಆರ್ಥಿಕ ಇಲಾಖೆಗೆ ಕೇಳಿದ್ದೇನೆ ಎಂದು ಈಶ್ವರಪ್ಪ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಖೂಬಾ ಸೇರಿ ಕರ್ನಾಟಕದ ಈ ನಾಲ್ವರಿಗೆ ಮೋದಿ ಸಂಪುಟದಲ್ಲಿ ಮಂತ್ರಿಗಿರಿ ಬಹುತೇಕ ಖಚಿತ
ನಿನ್ನೆ 1200 ಕೋಟಿ ನಮ್ಮ ಇಲಾಖೆಗೆ ಕೊಡಲಾಗಿದೆ. ಇದಕ್ಕೆ ಯಡಿಯೂರಪ್ಪನವರಿಗೆ ನಾನು ಧನ್ಯವಾದ ಹೇಳುತ್ತೇನೆ. ನಮ್ಮಲ್ಲಿ ಯಾವುದೇ ಗೊಂದಲುಗಳು ಇಲ್ಲ, ಎಲ್ಲಾ ಬಗೆ ಹರಿದಿದೆ. ಇನ್ನೂ ಎರಡು ವರ್ಷ ನಮ್ಮ ಸರ್ಕಾರ ಉತ್ತಮ ಕೆಲಸ ಮಾಡುತ್ತದೆ. ಜುಲೈ 12 ಮತ್ತು 13ರಂದು ನಾನು ದೆಹಲಿಗೆ ಹೋಗುತ್ತಿದ್ದೇನೆ.
ಮನೆ ಮನೆಗೆ ಗಂಗೆ ಅನ್ನೋ ಕೇಂದ್ರದ ಯೋಜನೆ ಹಿನ್ನೆಲೆ ದೆಹಲಿಗೆ ಹೋಗ್ತಿದ್ದೇನೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಭೇಟಿ ಆಗುತ್ತೇನೆ. ಈ ವಿಚಾರವಾಗಿ ಸಿಎಂ ಯಡಿಯೂರಪ್ಪ ಜೊತೆ ಕಳೆದ ವಾರ ಸಭೆ ಆಗಿದೆ. ಸಿಎಂ ನನಗೆ ಹೋಗಲು ಹೇಳಿದ್ದಾರೆ, ನಾನೇ ಹೊಗ್ತಿದ್ದೇನೆ ಎಂದರು.