ಕಲಬುರಗಿ: ಮಂಗಳೂರಿನ ಗೋಲಿಬಾರ್ ಪ್ರಕರಣಕ್ಕೆ ಕಾರಣರಾದ ಪೊಲೀಸ್ ಆಯುಕ್ತರನ್ನು ತಕ್ಷಣ ಅಮಾನತು ಮಾಡಿ, ಉಚ್ಚನ್ಯಾಯಾಲಯ ನ್ಯಾಯಮೂರ್ತಿಗಳಿಂದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪೀಪಲ್ಸ್ ಪೋರಂ ಸಂಘಟನೆ ಆಗ್ರಹಿಸಿದೆ.
ಸರ್ಕಾರ ಇಬ್ಬರು ಯುವಕರ ಮೇಲೆ ಗೋಲಿಬಾರ್ ನಡೆಸಿ ಕೊಂದು ಪ್ರಾಣಗಳ ಹರಣ ಮಾಡಿದೆ. ಬಳಿಕ ತಮ್ಮ ತಪ್ಪು ಮುಚ್ಚಿಕೊಳ್ಳಲು ತಿದ್ದುಪಡಿ ಮಾಡಿದ ವಿಡಿಯೋಗಳನ್ನು ಬಹಿರಂಗಗೊಳಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ಘೋಷಿಸಿದ್ದ 10 ಲಕ್ಷ ರೂಪಾಯಿ ಪರಿಹಾರ ಆರ್.ಎಸ್.ಎಸ್ ಒತ್ತಡಕ್ಕೆ ಮಣಿದು ಸರ್ಕಾರ ಪರಿಹಾರ ಹಿಂಪಡೆದಿರುವುದು ಸರಿಯಲ್ಲ ಎಂದು ಮಾನ್ಪಡೆ ಆಕ್ರೋಶ ಹೊರಹಾಕಿದರು. ಬಿಜೆಪಿ ಪಕ್ಷದ ಚಿಲ್ಲರೆ ರಾಜಕಾರಣವೇ ಇದಕ್ಕೆ ಕಾರಣ. ಪ್ರಕರಣದ ತಪ್ಪಿತಸ್ಥರಾದ ಪೊಲೀಸ್ ಆಯುಕ್ತ ಹರ್ಷರಿಂದ ತನಿಖೆ ನಡೆಸಿದರೆ ಯಾವುದೇ ಪ್ರಯೋಜನ ಇಲ್ಲ. ಅವರನ್ನು ಅಮಾನತು ಮಾಡಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಆಗ್ರಹಿಸಿದರು.