ಕಲಬುರಗಿ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ ಪಾಟೀಲ್ ಸಾವಿನ ಕುರಿತಾಗಿ ಯಾವುದೇ ರೀತಿಯ ತನಿಖೆ ನಡೆಸಿದರೂ ಏನೂ ಪ್ರಯೋಜನವಿಲ್ಲ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಅವರು, ಡಬಲ್ ಇಂಜಿನ್ ಸರ್ಕಾರದಿಂದ ಪಾರದರ್ಶಕ ತನಿಖೆ ಅಸಾಧ್ಯ. ಸಂತೋಷ ಪಾಟೀಲ್‌ಗೆ ನ್ಯಾಯ ಸಿಗಲ್ಲ. ಅಂತಿಮವಾಗಿ ಹಳಿ ಮೇಲೆ ಕುಳಿತವರೇ ಸಾಯುತ್ತಾರೆ. ಘಟನೆ ಸಂಬಂಧ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ, ಅಭಿವೃದ್ಧಿ ವಿಚಾರದಲ್ಲಿ ಗುತ್ತಿಗೆದಾರರರು ಬೇಸತ್ತು ಹೋಗಿದ್ದಾರೆ ಎಂದರು.
ಸಚಿವರು ಕಾಮಗಾರಿಗೆ ಪರ್ಸಂಟೇಜ್ ಕೇಳುತ್ತಾರೆ ಎಂದು ಗುತ್ತಿಗೆದಾರರು ನೇರವಾಗಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಇದಕ್ಕೆ ಹೇಗೆ ಕಡಿವಾಣ ಹಾಕಬೇಕು ಎಂದು ವಿಚಾರ ಮಾಡಲಿಲ್ಲ. ಈ ಬಗ್ಗೆ ದೆಹಲಿಯಲ್ಲಿ ಸಿಎಂ ಬೊಮ್ಮಾಯಿಗೆ ಖುದ್ದು ನಾನೇ ಹೇಳಿದ್ದೆ. ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಿ ಅಂತಾ ಸಲಹೆ ನೀಡಿದ್ದೆ. ಆದ್ರೂ ಏನು ಬದಲಾವಣೆ ಆಗಲಿಲ್ಲ. ಪ್ರಕರಣ ಕುರಿತಂತೆ ಈಗಲಾದ್ರೂ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಸಂತೋಷ್ ಡೆತ್ ನೋಟ್ ಬಗ್ಗೆ ಈಶ್ವರಪ್ಪ ಹೇಳಿದ್ದೇನು : ಸಚಿವರ ವಿಶೇಷ ಸಂದರ್ಶನ