ಕಲಬುರಗಿ: ಜಿಲ್ಲಾದ್ಯಂತ ಕಾರ ಹುಣ್ಣಿಮೆ ಸಡಗರ ಕಳೆಗಟ್ಟಿದೆ. ತಾಲೂಕಿನ ಜಂಬಗಾ(ಬಿ) ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ರೈತರು ತನ್ನ ಒಡನಾಡಿ ಎತ್ತುಗಳನ್ನು ಶೃಂಗಾರ ಮಾಡಿ ಎತ್ತಿನ ಬಂಡಿ ಕಟ್ಟಿ ಗ್ರಾಮವೆಲ್ಲ ಓಡಾಡಿಸಿ ಸಂಭ್ರಮಾಚರಿಸಿದರು.
ಕಾರ ಹುಣ್ಣಿಮೆ ಬಂದರೆ ಸಾಕು ಉತ್ತರ ಕರ್ನಾಟಕದ ರೈತಾಪಿ ವರ್ಗಕ್ಕೆ ಎಲ್ಲಿಲ್ಲದ ಸಂಭ್ರಮ, ಸಡಗರ. ತಮ್ಮ ಕೃಷಿ ಒಡನಾಡಿಯಾದ ಎತ್ತುಗಳಿಗೆ ಶೃಂಗರಿಸಿ, ಅಲಂಕಾರ ಮಾಡಿ, ಊರೆಲ್ಲ ಓಡಾಡಿಸಿ ಖುಷಿಪಡುತ್ತಾರೆ. ಅದರಲ್ಲಿಯೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಕಾರ ಹುಣ್ಣಿಮೆ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.
ಮುಂಗಾರು ಆರಂಭವಾಗುತ್ತಿದ್ದಂತೆ ಬರುವ ಪ್ರಥಮ ಹಬ್ಬವೇ ಈ ಕಾರ ಹುಣ್ಣುಮೆ. ಹೀಗಾಗಿ ರೈತರು ಉಳುಮೆಗಾಗಿ ಎತ್ತುಗಳನ್ನು ಗಳೆ(ಬಂಡಿ) ಕಟ್ಟುತ್ತಾರೆ. ದೇಶಕ್ಕೆ ರೈತ ಬೆನ್ನೆಲುಬಾದರೆ ರೈತನಿಗೆ ಎತುಗಳೇ ಬೆನ್ನೆಲುಬು. ಹಬ್ಬದ ದಿನ ರೈತರು ಬೆಳಗ್ಗೆ ಎತ್ತುಗಳಿಗೆ ಮೈ ತೊಳೆದು, ಹಣೆಗೆ ಬಾಸಿಂಗ ಕಟ್ಟಿ, ಕೋಡಿಗೆ ಗೊಂಡೆ ಹಾಕಿ, ಹೆಗಲಿಗೆ ಗಂಟೆಗಳನ್ನು ಕಟ್ಟಿ ವಿವಿಧ ತರಹದ ಬಣ್ಣಗಳನ್ನು ಬಳಿದು ಸಿಂಗರಿಸುತ್ತಾರೆ. ಬಳಿಕ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ನಂತರ ಮನೆಗೆ ಬಂದು ಹೋಳಿಗೆ ಊಟ ಉಣಿಸುವುದು ಸಂಪ್ರದಾಯ.
ಗುಂಡು ಕಲ್ಲು ಎತ್ತು ಸ್ಪರ್ಧೆ: ಕಾರ ಹುಣ್ಣಿಮೆ ಹಿನ್ನೆಲೆ ಗ್ರಾಮ ದೇವತೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಗುಂಡು ಕಲ್ಲು ಎತ್ತುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಮಹಾದೇವ ರಾಣೋಜಿ ಎಂಬುವವರು 125 ಕೆಜಿಯ ಗುಂಡನ್ನು ಎತ್ತುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.