ಕಲಬುರಗಿ: ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಭೀಕರ ಕೊಲೆಯ ನಂತರ ಪೊಲೀಸರ ಕಾರ್ಯ ವೈಖರಿ ಚುರುಕುಗೊಂಡಿದೆ. ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪುಂಡರನ್ನು ಡಿಎಆರ್ ಮೈದಾನಕ್ಕೆ ಕರೆ ತಂದು ಪರೇಡ್ ನಡೆಸುವ ಮೂಲಕ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಡಿಸಿಪಿ ಆಡೂರು ಶ್ರೀನಿವಾಸುಲು ನೇತೃತ್ವದಲ್ಲಿ ರೌಡಿ ನಿಗ್ರಹ ದಳದ ಪೊಲೀಸರು ನಸುಕಿನ ಜಾವವೇ 50ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆಗಳಲ್ಲಿ ಮಾರಕಾಸ್ತ್ರ ಇಟ್ಟಿರುವ ಅನುಮಾನದ ಹಿನ್ನೆಲೆ, ಮನೆಗಳಲ್ಲಿ ಸರ್ಚ್ ಮಾಡಿದ್ದಾರೆ. ನಂತರ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ರೌಡಿಗಳನ್ನು ಡಿಎಆರ್ ಮೈದಾನಕ್ಕೆ ಕರೆತಂದು ಪರೇಡ್ ಮಾಡಿಸಿ ಬಾಲ ಬಿಚ್ಚದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನೀವಾಯ್ತು, ನಿಮ್ಮ ಕೆಲಸ ಆಯ್ತು ಅಂತ ಜೀವನ ನಡೆಸಬೇಕು. ಅದನ್ನು ಬಿಟ್ಟು ಶಾಂತಿ ಕದಡುವ ಕೆಲಸ ಮಾಡುವುದು, ಜನ ಸಾಮಾನ್ಯರಿಗೆ ಭಯ ಹುಟ್ಟಿಸುವ ಕೆಲಸ ಮಾಡುವುದು, ರೌಡಿಸಂ ಸೇರಿದಂತೆ ಸಮಾಜಘಾತುಕ ಕೆಲಸಗಳಲ್ಲಿ ಸಕ್ರಿಯವಾಗಿರೋದು ಕಂಡು ಬಂದರೆ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದರು. ನಮ್ಮ ಪೊಲೀಸರು ಸದಾ ಒಂದು ಕಣ್ಣನ್ನು ನಿಮ್ಮ ಮೇಲೆ ಇಟ್ಟಿರುತ್ತಾರೆ. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವುದು ಕಂಡುಬಂದರೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಅಂತ ರೌಡಿಗಳಿಗೆ ಡಿಸಿಪಿ ಆಡೂರು ಶ್ರೀನಿವಾಸಲು ಎಚ್ಚರಿಸಿದರು.
ಇದನ್ನೂ ಓದಿ: ಬಾಗೇಪಲ್ಲಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕೆಎಸ್ಆರ್ಟಿಸಿ ಬಸ್
ಕಳೆದೆ ಕೆಲ ದಿನಗಳಿಂದ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆಗಳು ನಡೆದಿದ್ದರಿಂದ ನಗರದಲ್ಲಿ ಜನ ಭಯಭೀತರಾಗಿದ್ದಾರೆ. ಎರಡು ದಿನಗಳ ಹಿಂದೆ ಕೇಂದ್ರ ಬಸ್ ಲ್ದಾಣದಲ್ಲಿ ಸಾವಿರಾರು ಜನರ ಎದುರೇ ಪೊಲೀಸ್ ಕಾನ್ಸ್ಟೇಬಲ್ ಪುತ್ರ ಅಭಿಷೇಕ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಹಿನ್ನೆಲೆ, ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ ಖಾಕಿ ಪಡೆ ರೌಡಿಗಳಿಗೆ ಚುರುಕು ಮುಟ್ಟಿಸಿದ್ದಾರೆ.