ಕಲಬುರಗಿ: ನೆರೆ ಪಿಡಿತ ಪ್ರದೇಶಗಳ ಅಧ್ಯಯನಕ್ಕಾಗಿ ಆಗಮಿಸಿದ ಕೇಂದ್ರದ ತಂಡದೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಭಾವುಕರಾದ ಘಟನೆ ಅಫಜಲಪುರ ತಾಲೂಕಿನ ಅಳ್ಳಗಿ.ಬಿ ಗ್ರಾಮದಲ್ಲಿ ನಡೆದಿದೆ.
ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಗೆ ಕಲಬುರಗಿ ಜಿಲ್ಲೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಹಲವು ಗ್ರಾಮಗಳ ಮನೆಗಳು ಪ್ರವಾಹ, ವರುಣನ ಆರ್ಭಟದಿಂದ ಹಾನಿಗೊಳಗಾಗಿದ್ದವು.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ರಮೇಶ್‍ಕುಮಾರ್ ಘಂಟಾ ನೇತೃತ್ವದ ವಿತ್ತ ಸಚಿವಾಲಯದ ಲೆಕ್ಕ ವಿಭಾಗದ ನಿರ್ದೇಶಕ ಡಾ. ಭರ್ತೇಂದು ಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ತಂಡ ಅಧ್ಯಯನಕ್ಕಾಗಿ ನೆರೆಪೀಡಿತ ಜಿಲ್ಲೆಯ ಹಲವು ಪ್ರದೇಶಗಳಿಗೆ ನಿನ್ನೆ ಭೇಟಿ ನೀಡಿತ್ತು. ಈ ವೇಳೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಕೂಡ ಸಾಥ್ ನೀಡಿದ್ರು.
ನೆರೆಹಾನಿ ಕುರಿತು ಅಧ್ಯಯನ ಮಾಡಲು ಎಂದು ಅಫಜಲಪುರ ತಾಲೂಕಿನ ಅಳ್ಳಗಿ ಬಿ ಗ್ರಾಮಕ್ಕೆ ಕೇಂದ್ರ ತಂಡದೊಂದಿಗೆ ತೆರಳಿ, ಮಳೆಯಿಂದ ಹಾನಿಯಾಗಿದ್ದ ಮನೆ ತೋರಿಸುವಾಗ ಕುಸಿದಿದ್ದ ಮನೆಯ ಒಳಗೆ ಸೀರೆಯಿಂದ ಕಟ್ಟಿರುವ ಜೋಳಿಗೆ, ಕಲ್ಲು-ಮಣ್ಣಿನಡಿ ಬಿದ್ದಿದ್ದ ಮಗುವಿನ ಗೊಂಬೆ ಕಂಡು ಡಿ.ಸಿ ಒಂದು ಕ್ಷಣ ಭಾವುಕರಾದರು. 'ಅಲ್ಲಿ ನೋಡಿ, ಮಗುವಿನ ಗೊಂಬೆ ಬಿದ್ದಿದೆ' ಎಂದು ಜತೆಯಲ್ಲಿದ್ದ ಅಧಿಕಾರಿಗಳಿಗೆ ವಿವರಿಸಿದಾಗ ಸ್ಥಳದಲ್ಲಿದ್ದವರು ಕೆಲಕಾಲ ಮೌನಕ್ಕೆ ಶರಣಾದರು.