ಕಲಬುರಗಿ: ನಾಳೆ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಮೇಲೆ ಕಲ್ಯಾಣ ಕರ್ನಾಟಕ ಭಾಗದ ಜನರ ನಿರೀಕ್ಷೆ ಹೆಚ್ಚಾಗಿದೆ. ಈ ಬಾರಿಯಾದರೂ ಕೇಂದ್ರ ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ಸಿಗಬಹುದು ಎಂಬ ಬೆಟ್ಟದಷ್ಟು ನಿರೀಕ್ಷೆಯನ್ನು ಇಲ್ಲಿನ ಜನರು ಹೊಂದಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಫೆ.1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಹೀಗಾಗಿ ಕೇಂದ್ರ ಬಜೆಟ್ನತ್ತ ಎಲ್ಲರ ಚಿತ್ತ ನೆಟ್ಟಿದೆ. ಕಲ್ಯಾಣ ಕರ್ನಾಟಕ ಭಾಗದ ಜನರು ಸಹ ಕಾತರದಿಂದ ಕಾಯುತ್ತಿದ್ದಾರೆ. ಈ ಭಾಗಕ್ಕೆ ರೈಲ್ವೆ ಡಿವಿಷನ್, ನ್ಯಾಷನಲ್ ಹೈವೇ ಸೇರಿದಂತೆ ಹಲವು ಯೋಜನೆಗಳು ರದ್ದಾಗಿದ್ದು, ಈ ಬಜೆಟ್ನಲ್ಲಿ ಮರುಜೀವ ಸಿಗಲಿದೆಯಾ ಎಂಬ ನಿರೀಕ್ಷೆ ಜನರಲ್ಲಿದೆ.
ಕಲ್ಯಾಣ ಕರ್ನಾಟಕ ಭಾಗದಿಂದ 5 ಜನ ಬಿಜೆಪಿ ಸಂಸದರಿದ್ದಾರೆ. ಇಷ್ಟಾದರೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗವನ್ನು ಕಡೆಗಣಿಸುತ್ತಿದೆ ಎಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓದಿ: ದಿ. ಮಾದೇಗೌಡರ ಬಗ್ಗೆ ಅವಹೇಳನ : ಜೆಡಿಎಸ್ನಿಂದ ಶಿವರಾಮೇಗೌಡ ಉಚ್ಚಾಟನೆ
ಈ ಬಾರಿಯಾದರೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕಾಗಿದೆ. ಪ್ರಮುಖವಾಗಿ ಬಹುದಿನಗಳ ಬೇಡಿಕೆಯಾಗಿರುವ ರೈಲ್ವೆ ಡಿವಿಷನ್, ಸೆಕೆಂಡ್ ರಿಂಗ್ ರೋಡ್, ನ್ಯಾಷನಲ್ ಹೈವೇ, ಏಮ್ಸ್, ನಿಮ್ಸ್ ಸ್ಥಾಪಿಸಬಹುದೆಂಬ ನಿರೀಕ್ಷೆ ಇದೆ. ಇದಲ್ಲದೆ ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವಂತಹ ಬೃಹತ್ ಕಾರ್ಖಾನೆ ನಿರ್ಮಾಣ ಮಾಡುವ ಮೂಲಕ ಕೇಂದ್ರ ಸರ್ಕಾರ ಹಿಂದುಳಿದ ಈ ಭಾಗಕ್ಕೆ ನ್ಯಾಯ ನೀಡಬಹುದು ಎಂದು ಅಂದಾಜಿಸಲಾಗಿದೆ.
ಉದ್ಯಮಿಗಳ ನಿರೀಕ್ಷೆ.. ಬಜೆಟ್ ನಿರೀಕ್ಷೆ ಕುರಿತು ಪ್ರತಿಕ್ರಿಯೆ ನೀಡಿರುವ ಹೆಚ್‌ಕೆಸಿಸಿಐ ಪ್ರಮುಖರು, ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಾದರೂ ಕಲಬುರಗಿಯಲ್ಲಿ ಟೆಕ್ಸಟೈಲ್ ಪಾರ್ಕ್ ಘೋಷಣೆ ಮಾಡುವ ನಿರೀಕ್ಷೆಯನ್ನು ಹೊಂದಿದ್ದಾರೆ. ಟೆಕ್ಸಟೈಲ್ ಪಾರ್ಕ್ಗೆ ರಾಜ್ಯ ಸರ್ಕಾರದಿಂದ ಮಂಜೂರಾತಿ ದೊರೆತಿದೆ. ಇದೀಗ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಟೆಕ್ಸಟೈಲ್ ಪಾರ್ಕ್ ಘೋಷಿಸಿದರೆ ಈ ಭಾಗದಲ್ಲಿ ಸುಮಾರು 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ.
ಕಲಬುರಗಿಯ ಇಎಸ್ಐಸಿ ಆಸ್ಪತ್ರೆಯನ್ನು ಏಮ್ಸ್ ಮೇಲ್ದರ್ಜೆಗೆ ಏರಿಸುವ ಮೂಲಕ ಆರೋಗ್ಯ ವಲಯ ಸಾಕಷ್ಟು ಅಭಿವೃದ್ಧಿ ಹೊಂದುವ ನಿರೀಕ್ಷೆ ಇದೆ. ನಿಮ್ಸ್ ಕೂಡ ಈ ಭಾಗಕ್ಕೆ ಅವಶ್ಯಕವಾಗಿದೆ. ನಿಮ್ಸ್ ಸ್ಥಾಪನೆಯಾದ್ರೆ ಈ ಭಾಗದ ಯುವಕರಿಗೆ ಬೇರೆಡೆ ಹೋಗಿ ದುಡಿಯುವುದು ತಪ್ಪಲಿದೆ ಎಂಬ ಆಶಾಭಾವನೆ ಈ ಭಾಗದ ಜನರದ್ದು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ