ಕಲಬುರಗಿ: ಎಸ್ಐಟಿ ತನಿಖೆಯಿಂದ ಸಿಡಿ ವಿಚಾರದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಸಿಡಿ ವಿಚಾರ ತನಿಖೆ ನಡೆಸುವಂತೆ ಈ ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸಿದ್ದೆವು. ಎಸ್ಐಟಿಯಿಂದ ತನಿಖೆಯಾಗಲಿ. ಆದರೆ, ಮುಖ್ಯ ನ್ಯಾಯಮೂರ್ತಿಗಳು ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಒತ್ತಾಯಿಸಲಾಗಿತ್ತು. ಆದರೆ, ಸರ್ಕಾರ ಕೇಳಲಿಲ್ಲ. ಇದೀಗ ಸಂತ್ರಸ್ತೆಯೇ ಮುಖ್ಯ ನ್ಯಾಯಮೂರ್ತಿಗಳಿಗೆ ತನಿಖೆ ನಡೆಸುವಂತೆ ಪತ್ರ ಬರೆದಿದ್ದಾಳೆ. ನ್ಯಾಯಮೂರ್ತಿಗಳು ಏನು ಮಾಡಲಿದ್ದಾರೆ ನೋಡೋಣ ಎಂದರು.
ಡಿಕೆಶಿ ಮೇಲೆ ಕಲ್ಲು ತೂರಾಟ: ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್ ಕಾರು ಮೇಲೆ ಕಲ್ಲೆಸೆದು ಕಾನೂನು ಕೈಗೆ ತೆಗೆದುಕೊಳ್ಳಲಾಗಿದೆ. ಅದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಕಾನೂನು ಹೋರಾಟ ಮಾಡಬೇಕು, ಗೂಂಡಾಗಿರಿ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಉಪ ಚುನಾವಣೆ ವಿಚಾರ: ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿವೆ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್-ಬಿಜೆಪಿ ಹುನ್ನಾರ ನಡೆಸಿವೆ. ಮುಂದೆ ಸತ್ಯಾಂಶ ಹೊರಬರಲಿದೆ ಎಂದ ಸಿದ್ದರಾಮಯ್ಯ, ಶಾಸಕ ದಿ.ನಾರಾಯಣರಾವ್ ಒಳ್ಳೆಯ ಕೆಲಸಗಾರರಾಗಿದ್ದರು. ಹೀಗಾಗಿ ಉಪ ಚುನಾವಣೆಯಲ್ಲಿ ಅವರ ಪತ್ನಿಗೆ ಟಿಕೆಟ್ ನೀಡಲಾಗಿದ್ದು, ಅವರ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.
ಓದಿ: ಯುವತಿ ಪೋಷಕರಿಂದ ನನ್ನ ವಿರುದ್ಧ ಆರೋಪ ಮಾಡಿಸಲಾಗುತ್ತಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್