ಕಲಬುರಗಿ: ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ವೀರ್ ಹಾಗೂ ಉಜನಿ ಜಲಾಶಯದಿಂದ ಭೀಮಾನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅಫಜಲಪುರ ತಾಲೂಕಿನ ಮಣ್ಣೂರು ಐತಿಹಾಸಿಕ ಹೊಳಿ ಯಲ್ಲಮ್ಮ ದೇವಿ ದೇವಸ್ಥಾನ ಮುಳುಗಡೆಯಾಗಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿರುವ ವೀರ ಹಾಗೂ ಉಜನಿ ಜಲಾಶಯದಿಂದ 90,000 ಕ್ಯೂಸೆಕ್ಗಿಂತ ಹೆಚ್ಚು ನೀರನ್ನು ಭೀಮಾ ನದಿಗೆ ಹರಿಬಿಡಲಾಗುತ್ತಿದೆ. ಪರಿಣಾಮ ಅಫಜಲಪುರ ತಾಲೂಕಿನ ಭೀಮಾ ಸೊನ್ನ ಬ್ಯಾರೇಜ್‌ಗೆ 1.15 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮುನ್ನಚ್ಚರಿಕೆ ಕ್ರಮವಾಗಿ ಬ್ರೀಡ್ಜ್ನಿಂದ 1.07 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ ಎಂದು ನೀರಾವರಿ ಇಲಾಖೆ ಅಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷದಲ್ಲಿ ಭಾರಿ ಪ್ರವಾಹ ಸೃಷ್ಟಿಯಾಗಿದ್ದ ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನಲ್ಲಿ ಈ ಬಾರಿಯೂ ಮತ್ತೆ ಪ್ರವಾಹದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಗೋಚರಿಸುತ್ತಿದೆ. ಈಗಾಗಲೇ ಐತಿಹಾಸಿಕ ಹೋಳಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಬ್ರೀಡ್ಜ್ ಸಂಪೂರ್ಣವಾಗಿ ಜಲಾವೃತಗೊಂಡಿದೆ. ದೇವಸ್ಥಾನ ಮುಳುಗಡೆ ಹಂತಕ್ಕೆ ಬಂದಿರುವ ಹಿನ್ನೆಲೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಇತ್ತ ಘತ್ತರಗಾ ಬ್ರೀಡ್ಜ್ ಮುಳುಗಡೆಯಾಗಿದ್ದು, ಜೇವರ್ಗಿ, ಜೇರಟಗಿ ವಿಜಯಪುರ ಜಿಲ್ಲೆಯ ಗ್ರಾಮಗಳು ಸೇರಿದಂತೆ ಇತರ ಗ್ರಾಮಗಳಿಗೆ ತೆರಳುವ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಇದನ್ನೂ ಓದಿ: ಪ್ರವಾಹದಲ್ಲಿ ನಾವು ಕೊಚ್ಚಿ ಹೋಗಿದ್ದರೆ ಚೆನ್ನಾಗಿರುತ್ತಿತ್ತು.... ಕಲಬುರಗಿಯಲ್ಲಿ ಮನೆಕಳೆದುಕೊಂಡವರ ಅಳಲು