ಕಲಬುರಗಿ: ಪ್ರಾರ್ಥನಾ ಮಂದಿರವೊಂದರಲ್ಲಿರುವ ಶಿವಲಿಂಗ ಶುದ್ಧಿ ಮತ್ತು ಪೂಜೆಗೆ ಕೆಲ ಸಂಘಟನೆಗಳು ಸಿದ್ಧತೆ ನಡೆಸುತ್ತಿದ್ದು, ಇದಕ್ಕೆ ಇನ್ನೊಂದು ಗುಂಪಿನವರ ವಿರೋಧದಿಂದಾಗಿ ಜಿಲ್ಲೆಯ ಆಳಂದ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದೆ. ನಿಷೇಧಾಜ್ಞೆಯ ಮಧ್ಯೆಯೂ ಇಲ್ಲಿ ಒಂದು ಗುಂಪಿನ ಯುವಕರು ಮಾರಕಾಸ್ತ್ರಗಳನ್ನು ಹಿಡಿದು ಒಡಾಡುತ್ತಿರುವುದು ತೀವ್ರ ಆತಂಕ ಉಂಟು ಮಾಡಿದೆ.
ಪ್ರಾರ್ಥನಾ ಮಂದಿರವೊಂದರಲ್ಲಿರುವ ಶಿವಲಿಂಗ ಶುದ್ಧಿ ಮತ್ತು ಪೂಜೆಗೆ ಕರೆ ನೀಡಿದ ಬಳಿಕ ಉಂಟಾದ ಗಲಭೆ ಬಳಿಕ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದರ ಮಧ್ಯೆಯೂ ಪ್ರಾರ್ಥನಾ ಮಂದಿರದ ಸುತ್ತಮುತ್ತ ಒಂದು ಗುಂಪಿನ ಯುವಕರು ತಲವಾರ್ಗಳನ್ನು ಹಿಡಿದು ಓಡಾಡುತ್ತಿರುವುದು ಕಂಡು ಬಂದಿದೆ.
ಪ್ರಾರ್ಥನಾ ಮಂದಿರವೊಂದರಲ್ಲಿರುವ ಶಿವಲಿಂಗಕ್ಕೆ ಶುದ್ಧಿ ಹಾಗೂ ಪೂಜೆಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಗಮಿಸುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಆಳಂದದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪೊಲೀಸರ ತಡೆ: ಶಿವಲಿಂಗ ಶುದ್ಧಿಗೆ ಬರುತ್ತಿರುವ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ತಡೆಯುತ್ತಿದ್ದಾರೆ.
ಸಿದ್ದಲಿಂಗ ಸ್ವಾಮೀಜಿ ವಶಕ್ಕೆ: ಪ್ರವೇಶ ನಿಷೇಧದ ಮಧ್ಯೆಯೂ ಆಳಂದ ಪಟ್ಟಣಕ್ಕೆ ಹೊರಟಿದ್ದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಹೊರವಲಯದ ಕೋಟನೂರು ಬಳಿ ಸಿದ್ದಲಿಂಗ ಸ್ವಾಮೀಜಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆಳಂದ ಪಟ್ಟಣ ಪ್ರವೇಶಕ್ಕೆ ಸ್ವಾಮೀಜಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.