ಸೇಡಂ: ಪಟ್ಟಣದ ತರ್ನಳ್ಳಿ ರಸ್ತೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಶಾಂತಕುಮಾರ ಚನ್ನಕ್ಕಿ ತರ್ನಳ್ಳಿ, ರಸ್ತೆಯಲ್ಲಿ ಒಟ್ಟು 5 ಎಕರೆ ಪ್ರದೇಶದಲ್ಲಿ ಒಳಚರಂಡಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗುತ್ತಿದೆ. ಘಟಕ ಸ್ಥಾಪನೆಗೂ ಮುನ್ನ ಸುತ್ತಮುತ್ತಲು ಇರುವ ಜಮೀನುಗಳ ರೈತರಿಗೆ ಮಾಹಿತಿ ನೀಡಿಲ್ಲ. ಅವರ ಅಭಿಪ್ರಾಯವನ್ನೂ ಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ ಘಟಕ ಸ್ಥಾಪನೆಯಿಂದ ಅನೇಕ ಜಮೀನುಗಳಿಗೆ ಹಾನಿಯಾಗಲಿದೆ. ಜನ ಜಾನುವಾರುಗಳ ಜೀವಕ್ಕೂ ಅಪಾಯವುಂಟಾಗಲಿದೆ. ಜೊತೆಗೆ ಅಂತರ್ಜಲ ಮಟ್ಟ ಕಲುಷಿತವಾಗುವ ಸಾಧ್ಯತೆ ಇದ್ದು, ಕೂಡಲೇ ಘಟಕ ಸ್ಥಾಪನೆಯ ಕಾರ್ಯವನ್ನು ಕೈಬಿಡಬೇಕು. ಇಲ್ಲವಾದರೆ ತಮ್ಮ ಸಮಾಧಿ ಮೇಲೆ ಘಟಕ ಸ್ಥಾಪಿಸಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.