ಕಲಬುರಗಿ: ಹಣ ಲೂಟಿ ಮಾಡಲು ಬಿಜೆಪಿಯವರಿಗೆ ಕೋವಿಡ್ ಹಬ್ಬವಾಗಿದೆ. ಮಂತ್ರಿಗಳು ಕೂಡ ಕೊರೊನಾದಿಂದ ನನಗೇನು ಸಿಗುತ್ತೆ ಅಂತಾ ಚಿಂತೆ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಸ್ಪತ್ರೆ, ಮೇಡಿಕಲ್ ಕಾಲೇಜುಗಳು ಇವೆ. 10,500 ಬೆಡ್ಗಳ ಕೋವಿಡ್ ಕೇರ್ ಸೇಂಟರ್ ಮಾಡಲು ಸಿದ್ಧತೆ ಮಾಡ್ತಿದ್ದರು. ನಾಲ್ಕು ಸಾವಿರ ಕೋಟಿ ಅವ್ಯವಹಾರ ಆಗಿದೆ. ಎಲ್ಲಾ ಇಲಾಖೆಗಳ ಖರೀದಿಯಲ್ಲಿ ಭ್ರಷ್ಟಾಚಾರ ಅಡಗಿದೆ. ಆರೋಗ್ಯ, ಆಹಾರ ವಿಚಾರದಲ್ಲಿ ದುಡ್ಡು ಹೊಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಡಿಕೆಶಿ, ಭ್ರಷ್ಟಾಚಾರ ಮಾಡೋಕೆ ನಾವು ಸಹಕಾರ ನೀಡಬೇಕಾ ಎಂದು ಪ್ರಶ್ನಿಸಿದ್ದಾರೆ.
ಪಿಪಿಇ ಕಿಟ್, ಥರ್ಮಲ್ ಸ್ಕ್ಯಾನರ್, ಮಾಸ್ಕ್, ಸ್ಯಾನಿಟೈಸರ್ ಹೀಗೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಮಾಡಲಾಗಿದೆ. ರೋಗ ಹರಡಲು ನೀವೇ ಕಾರಣೀಕರ್ತರು. ನಿಮ್ಮ ಮೇಲೆ ಕೇಸ್ ದಾಖಲಾಗಬೇಕು ಎಂದು ಕಮಲ ಪಾಳಯದ ವಿರುದ್ಧ ಗುಡಿಗಿದರು.
ತಾಕತ್ತಿದ್ರೆ ಮಾಧ್ಯಮಗಳಿಗೆ ನೋಟಿಸ್ ಕೊಡಿ
ನಮ್ದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಾರ್ಟಿ. ಎಂತಹ ನೋಟಿಸ್ ಬಂದರೂ ಹೆದರಿಲ್ಲ. ಇನ್ನು ಈ ನೋಟಿಸ್ಗೆ ಹೇದರುತ್ತಿವಾ? ಇಂತಹ ನೂರು ನೋಟಿಸ್ ಕೊಡಿ, ಇದನ್ನ ಎದುರಿಸುವ ಶಕ್ತಿ ರಾಜ್ಯದ ಜನ ನಮಗೆ ಕೊಟ್ಟಿದ್ದಾರೆ. ನಾವು ಆರೋಪಗಳನ್ನ ಮಾಡ್ತಿದ್ದೇವೆ. ಮಾಧ್ಯಮಗಳೇ ನಿಮ್ಮ ಅವ್ಯವಹಾರದ ಜನ್ಮ ಜಾಲಾಡಿದ್ದಾರೆ. ತಾಕತ್ತಿದ್ರೆ ಮಾಧ್ಯಮಗಳಿಗೆ ನೋಟಿಸ್ ಕೊಡಿ. ಅವ್ಯವಹಾರದ ಆರೋಪ ಮಾಡಿದ್ದೇವೆ. ತನಿಖೆ ಮಾಡಿ. ನಾವೇನಾದ್ರು ತಪ್ಪು ಮಾಡಿದ್ರೆ ಶಿಕ್ಷೆ ಕೊಡಿ. ನಾವು ಸಿದ್ಧರಿದ್ದೇವೆ ಎಂದು ಎನ್. ರವಿಕುಮಾರ್ ನೀಡಿರುವ ಲೀಗಲ್ ನೋಟಿಸ್ ಕುರಿತು ಹರಿಹಾಯ್ದರು.
ಲಾಕ್ಡೌನ್ ಆಯ್ತು, ಸೀಲ್ ಡೌನ್ ಆಯ್ತು, ಬ್ಲಾಕ್ ಡೌನ್ ಕೂಡ ಆಯ್ತು... ಇನ್ನೂ ಪರಿಸ್ಥಿತಿ ಯಥಾಸ್ಥಿತಿಯಲ್ಲಿದೆ
ಇವತ್ತು ಇಡೀ ರಾಜ್ಯದಲ್ಲಿ ಕೋವಿಡ್ ಸಮಸ್ಯೆ ಎದುರಿಸುತ್ತಿದ್ದೇವೆ. ಹೆಮ್ಮಾರಿ ಕೊರೊನಾ ಓಡಿಸಲು ಸರ್ಕಾರಕ್ಕೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ. ಲಾಕ್ಡೌನ್ ಆಯ್ತು, ಸೀಲ್ ಡೌನ್ ಆಯ್ತು, ಬ್ಲಾಕ್ ಡೌನ್ ಆಯ್ತು. 120 ದಿನ ಆದ್ರು ನಾವು ಹಿಂದಿನ ಸ್ಥಿತಿಯಲ್ಲೇ ಇದ್ದೇವೆ. ಇಪ್ಪತ್ತು ದಿನಗಳಲ್ಲಿ ಕೊರೊನಾ ಗೆಲ್ಲುತ್ತೇವೆ ಅಂತಾ ಹೇಳಿದ್ರು. ಅದಕ್ಕೆ ನಾವು ಬೆಂಬಲ ಕೊಟ್ಟಿದ್ವಿ. ಆದ್ರು ಕೊರೊನಾ ಯಥಾಸ್ಥಿತಿಯಲ್ಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ, ಕೇಂದ್ರ ಸರ್ಕಾರ ಕೋವಿಡ್ಡ್ ನಿಯಂತ್ರಣದಲ್ಲಿ ಸಂಪೂರ್ಣ ವಿಫಲ
ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಮಂತ್ರಿಗಳನ್ನು, ಅಧಿಕಾರಿಗಳನ್ನು ಪ್ರಶ್ನೆ ಮಾಡಲು ನಿಮ್ಮ ಕೈಯಲ್ಲಿ ಆಗ್ತಿಲ್ಲ ಎಂದು ಪರೋಕ್ಷವಾಗಿ ಸಿಎಂ ವಿರುದ್ಧ ಡಿಕೆಶಿ ಕಿಡಿಕಾರಿದರು. ಅವ್ಯವಹಾರ ಆರೋಪಗಳ ಬಗ್ಗೆ ನೀವು ಲೆಕ್ಕಾನೂ ಕೊಡಬೇಕು, ಉತ್ತರವೂ ಕೊಡಬೇಕು, ತನಿಖೆನೂ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.