ಕಲಬುರಗಿ: ಕಳೆದ ವರ್ಷ ಕಲಬುರಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆದ ಖರ್ಚು ವೆಚ್ಚದ ಲೆಕ್ಕ ನೀಡುವಂತೆ ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ.
ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮಂಜುನಾಥ ನಾಲವಾರಕರ್, 2020ರ ಫೆಬ್ರವರಿಯಲ್ಲಿ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದು ಒಂದು ವರ್ಷವಾದ್ರೂ, ಈವರೆಗೆ ಸಮ್ಮೇಳನದ ಲೆಕ್ಕ ಕೊಟ್ಟಿಲ್ಲ ಎಂದರು.
ಲೆಕ್ಕ ಕೇಳಿದರೆ ಜಿಲ್ಲಾ ಕಸಾಪ ಅಧ್ಯಕ್ಷರು ಡಿಸಿ ಮೇಲೆ ಹೇಳ್ತಾರೆ, ಡಿಸಿ ಶರತ್ ಕಲಬುರಗಿಯಿಂದ ವರ್ಗಾವಣೆಯಾಗಿ ಹೋಗಿದ್ದಾರೆ. ಕೇಂದ್ರ ಕಸಾಪ ಅಧ್ಯಕ್ಷ ಮನು ಬಳಿಗಾರ ಸಹ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಂದ ಹಣವೆಷ್ಟು, ಖರ್ಚಾದ ಹಣವೆಷ್ಟು ಲೆಕ್ಕ ಕೊಡಬೇಕು. ಲೆಕ್ಕ ಕೊಡದೇ ಇದ್ದಲ್ಲಿ ದೊಡ್ಡ ಗೋಲ್ ಮಾಲ್ ಆಗಿದೆ ಎಂದು ಭಾವಿಸಬೇಕಾಗುತ್ತದೆ. ಈ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸುತ್ತೇವೆ. ಡಿಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕೂ ಬಗ್ಗದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.