ಕಲಬುರಗಿ: ರಾತ್ರೋರಾತ್ರಿ ಜೋಡೆತ್ತುಗಳ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಅಫಜಲಪುರ ತಾಲೂಕಿನ ಬಳ್ಳೂರ್ಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಇರಸಂಗಪ್ಪ ಬಾಲಕುಂದಿ ಎಂಬುವರಿಗೆ ಸೇರಿದ ಜೋಡೆತ್ತುಗಳ ಮೇಲೆ ದುಷ್ಕರ್ಮಿಗಳು ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಶುಕ್ರವಾರ ತಡರಾತ್ರಿ ಸುಮಾರು 12 ಗಂಟೆ ವೇಳೆಗೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳಿಗೆ ಬಡಿಗೆಯಿಂದ ಹೊಡೆದು ಜೀವಕ್ಕೆ ಕುತ್ತು ತಂದಿದ್ದಾರೆ. ಸುಮಾರು 2 ಲಕ್ಷ ರೂ. ಬೆಲೆಬಾಳುವ ಎತ್ತುಗಳನ್ನು ಕೊಂದು ಹಾಕಿದರೆ ಬಡ ರೈತನಿಗೆ ನಷ್ಟವಾಗಲಿದೆ ಎಂಬ ದುರುದ್ದೇಶದಿಂದ ಹಲ್ಲೆ ಮಾಡಿದಂತೆ ಕಂಡು ಬಂದಿದೆ.
ದುಷ್ಕರ್ಮಿಗಳ ಹಲ್ಲೆಯಿಂದ ಎತ್ತುಗಳು ಮೂಕರೋಧನೆ ಅನುಭವಿಸುತ್ತಿವೆ. ಸಂಪೂರ್ಣವಾಗಿ ಎತ್ತುಗಳು ಕುಸಿದು ಬಿದ್ದಿದ್ದು, ಮೇವು ಸಹ ತಿನ್ನುತ್ತಿಲ್ಲ. ಎತ್ತುಗಳ ಸ್ಥಿತಿ ನೋಡಿ ರೈತ ಈರಸಂಗಪ್ಪ ಕಣ್ಣೀರು ಹಾಕಿದ್ದಾರೆ. ಹಗೆತನವಿದ್ದರೆ ನಮ್ಮ ಮೇಲೆ ಸಾಧಿಸಬೇಕು, ಮೂಕ ಪ್ರಾಣಿಗಳ ಮೇಲಲ್ಲ. ಮನುಷ್ಯರಿಗೆ ನೋವಾದ್ರೆ ಹೇಳಿಕೊಳ್ಳಬಹುದು, ಮೂಕ ಪ್ರಾಣಿಗಳು ತಮ್ಮ ವೇದನೆಯನ್ನು ಹೇಗೆ ಹಂಚಿಕೊಳ್ಳುತ್ತವೆ ಎಂದು ದುಃಖ ವ್ಯಕ್ತಪಡಿಸಿದರು.
ಇನ್ನು ಸ್ಥಳಕ್ಕೆ ತೆರಳಿದ ವೈದ್ಯರು ಎರಡು ಎತ್ತುಗಳಿಗೆ ಚಿಕಿತ್ಸೆ ನೀಡಿದ್ದು, ಎತ್ತುಗಳು ಚೇತರಿಸಿಕೊಳ್ಳುತ್ತಿವೆ. ಮೂಕಪ್ರಾಣಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.