ಕಲಬುರಗಿ: 'ಹಿಜಾಬ್ ತಂಟೆಗೆ ಬಂದರೆ ತುಕ್ಡೆ ತುಕ್ಡೆ ಮಾಡಲಾಗುವುದು' ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಮುಕ್ರಂಖಾನ್ರನ್ನು ಬಂಧಿಸಲು ಹೈದರಾಬಾದ್ಗೆ ಪೊಲೀಸರು ತೆರಳಿದಾಗ ಹೈಡ್ರಾಮಾವೇ ನಡೆದಿದೆ. ಮುಕ್ರಂಖಾನ್ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯಕ್ಕೆ ತಣ್ಣಗಾಗಿರುವ ಮತ್ತು ಕೆಲ ದಿನಗಳ ಹಿಂದೆ ಭಾರಿ ಮಟ್ಟದಲ್ಲಿ ಸದ್ದು ಮಾಡಿದ್ದ ಹಿಜಾಬ್- ಕೇಸರಿ ಸಂಘರ್ಷದ ವೇಳೆ ಕಾಂಗ್ರೆಸ್ ನಾಯಕ ಮುಕ್ರಂ ಖಾನ್ ಹಿಜಾಬ್ ವಿಚಾರಕ್ಕೆ ಬಂದರೆ ತುಕ್ಡೆ ತುಕ್ಡೆ ಮಾಡಲಾಗುವುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಜೇವರ್ಗಿ ತಾಲೂಕಿನ ಆಂದೋಲ ಸಿದ್ದಲಿಂಗ ಸ್ವಾಮೀಜಿಯನ್ನು ಉಲ್ಲೇಖಿಸಿ ಬೆದರಿಕೆ ಹಾಕಿದ್ದರು.
ಇದರ ವಿರುದ್ಧ ವಿವಿಧ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿ ದೂರು ದಾಖಲಿಸಿವೆ. ಆದರೆ, ತಲೆಮರೆಸಿಕೊಂಡಿದ್ದ ಮುಕ್ರಂ ಖಾನ್ ಅಜ್ಞಾತ ಸ್ಥಳದಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಇದೀಗ ಜಾಮೀನು ಅರ್ಜಿ ವಜಾ ಆಗಿದ್ದು, ಪೊಲೀಸರು ಮುಕ್ರಂಖಾನ್ ಹೈದರಾಬಾದ್ನಲ್ಲಿ ಇರುವ ಬಗ್ಗೆ ಪತ್ತೆ ಹಚ್ಚಿದ್ದರು. ಬಂಧನಕ್ಕೆ ತೆರಳಿದ್ದಾಗ ಮುಕ್ರಂಖಾನ್ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಕ್ರಂ ಖಾನ್ ಆರೋಗ್ಯದ ಬಗ್ಗೆ ವೈದ್ಯರ ಸಲಹೆ ಪಡೆದ ಬಳಿಕ ಪೊಲೀಸರು ಬಂಧಿಸಲು ಸಿದ್ಧತೆ ನಡೆಸಿದ್ದಾರೆ.
ಆಂದೋಲ ಶ್ರೀ ಕಿಡಿ: ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ನ ಮುಕ್ರಂಖಾನ್ರನ್ನು ವಾರದಲ್ಲಿಯೇ ಬಂಧಿಸಲಾಗುವುದು ಎಂದು ಹೇಳಿದ್ದ ಪೊಲೀಸರ ವಿರುದ್ಧ ಶ್ರೀರಾಮಸೇನೆಯ ರಾಜ್ಯ ಗೌರವಾಧ್ಯಕ್ಷ ಆಂದೋಲ ಸಿದ್ಧಲಿಂಗ ಸ್ವಾಮೀಜಿ ಕಿಡಿಕಾರಿದ್ದು, ಹತ್ಯೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಬೆಟ್ಟ ಅಗೆದು ಇಲಿಯನ್ನು ಹಿಡಿಯುವ ಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ನಾನು ಸಿಎಂ ಆದ್ರೆ ನಿಮ್ಮ ಸರ್ಕಾರನೇ ಬರೋದಿಲ್ಲ, 20 ವರ್ಷ ನಾನೇ ಸಿಎಂ ಆಗಿರುತ್ತೇನೆ: ಸಿದ್ದರಾಮಯ್ಯಗೆ ಯತ್ನಾಳ್ ಟಾಂಗ್