ಸೇಡಂ: ವನ್ಯಜೀವಿ ಕೃಷ್ಣಮೃಗವನ್ನು ಬೇಟೆಯಾಡಿ ಮಾಂಸವನ್ನು ಸಾಗಿಸುತ್ತಿದ್ದ ಹೈದರಾಬಾದ್ ಮೂಲದ ಉದ್ಯಮಿಗಳನ್ನು ಬಂಧಿಸುವಲ್ಲಿ ಮುಧೋಳ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಮಲ್ಲಾಬಾದ ಸಮೀಪದಲ್ಲಿ ಹೈದರಾಬಾದ್ ಮೂಲದ 3 ಜನ ಹಾಗೂ ತಾಲೂಕಿನ ಚಂದಾಪೂರ ಗ್ರಾಮದ ಇಬ್ಬರು ಸೇರಿ ಬಂದೂಕಿನಿಂದ ಕೃಷ್ಣಮೃಗ ಬೇಟೆಯಾಡಿದ್ರು. ಅಲ್ಲದೆ, ಮಾಂಸ ಸಾಗಾಟಕ್ಕೆ ಯತ್ನಿಸುತ್ತಿದ್ದರು.
ಖಚಿತ ಮಾಹಿತಿ ಮೆರೆಗೆ ಮುಧೋಳ ಪಿಎಸ್ಐ ಚಿದಾನಂದ ಕಾಶಪ್ಪಗೋಳ, ಟ್ರೈನಿ ಪಿಎಸ್ಐ ದೇವಿಂದರರೆಡ್ಡಿ ಹಾಗೂ ಸಂತೋಷ ಸಿಬ್ಬಂದಿ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಐದು ಜನ ಆರೋಪಿಗಳ ಪೈಕಿ ಓರ್ವ ಹೈದರಾಬಾದ್ನ ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಯ ಪತಿ ಎನ್ನಲಾಗಿದೆ.
ವಾಸಿಫ್ ಹಸನ್ ಮಹ್ಮದ್ ಹಸನ್ (53), ಪೀರ ಅಹ್ಮದ ಖಾಸಿಂ ಅಲಿ (21), ಅಲಿ ಹುಸೇನ ಮಹ್ಮದ ಹುಸೇನ (42) ಹಾಗೂ ತಾಲೂಕಿನ ಚಂದಾಪೂರ ಗ್ರಾಮದ ಹಣಮಂತ ತಿಪ್ಪಣ್ಣ ಹೇಳವರ (45), ವೆಂಕಟೇಶ ಮೊಗಲಪ್ಪ ಹೇಳವರ (32) ಬಂಧಿತ ಆರೋಪಿಗಳು. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕಾರ ಚಿತ್ತಾಪೂರ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಮುಧೋಳ ಪೊಲೀಸರು ಅರಣ್ಯ ವಲಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ಬೊಲೆರೋ ಜೀಪ್, ರೈಫಲ್, ಕೃಷ್ಣಮೃಗದ ಮಾಂಸ ಹಾಗೂ ಚಾಕು, ಚೂರಿಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ತಿಳಿಸಿದ್ದಾರೆ.