ಕಲಬುರಗಿ: ಮಳೆ ನೀರಿನಿಂದ ತುಂಬಿ ಬೋರ್ಗರೆಯುತ್ತಿರುವ ಭೀಮಾ ನದಿಯಲ್ಲಿ ಪುಣ್ಯ ಸ್ನಾನಕ್ಕೆ ಇಳಿದ ಯುವಕ ನೀರುಪಾಲು ಆದ ಘಟನೆ ದೇವಲಗಾಣಗಾಪುರದ ಸಂಗಮದಲ್ಲಿ ನಡೆದಿದೆ. ಮಹಾರಾಷ್ಟ್ರ ರಾಜ್ಯದ ಲಾತೂರ್ ನಿವಾಸಿ ಗೋಪಾಲ್ ರಾಠೋಡ್ (20) ಮೃತ ಯುವಕನೆಂದು ಗುರುತಿಸಲಾಗಿದೆ. ನಿನ್ನೆ ಪುಣ್ಯ ಸ್ನಾನ ಮಾಡಲು ಸಂಗಮದಲ್ಲಿ ಇಳಿದಾಗ ನೀರನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಸ್ಥಳೀಯ ಪೊಲೀಸ್, ಎಸ್ಡಿಆರ್ಎಫ್, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ 11 ಜನರು ಬೋಟ್ ಮೂಲಕ ಶೋಧಕಾರ್ಯ ನಡೆಸಿದಾಗ ನಿನ್ನೆ ಸಂಜೆ ಶವ ಪತ್ತೆಯಾಗಿದೆ.
ದತ್ತಾತ್ರೇಯ ದೇವರ ದರ್ಶನಕ್ಕೆ ಕುಟುಂಬದ ಜೊತೆ ಯುವಕ ಆಗಮಿಸಿದ್ದರು. ಸಾಮಾನ್ಯವಾಗಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ದೇವರ ದರ್ಶನ ಮಾಡುವ ವಾಡಿಕೆ ಇದೆ. ಆದರೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವ ಕಾರಣ ಭಕ್ತರಿಗೆ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಆದರೂ ಯುವಕ ನೀರಿಗೆ ಇಳಿದಾಗ ಈ ದುರ್ಘಟನೆ ನಡೆದಿದೆ. ಮೃತ ಯುವಕನ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ದೇವಲ ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಪ್ರಾಣ ತೆಗೆದ ಹುಚ್ಚು ಸಾಹಸ.. ಪ್ರವಾಹದಲ್ಲಿ ನದಿ ದಾಟುವಾಗ ಟ್ರ್ಯಾಕ್ಟರ್ ಸಮೇತ ಮೂವರು ನೀರುಪಾಲು