ಕಲಬುರಗಿ: ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮಸ್ಥರಲ್ಲಿ ಏಕಾಏಕಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, 75ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲುಷಿತ ನೀರು ಸೇವನೆ ಘಟನೆಗೆ ಕಾರಣ ಎಂದು ವೈದ್ಯ ಮೂಲಗಳು ಸ್ಪಷ್ಟಪಡಿಸಿವೆ. ವಾಂತಿ-ಭೇದಿಯಿಂದ ಬಳಲುತ್ತಿದ್ದ ಇವರ ಪೈಕಿ ಓರ್ವನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಚಿತ್ತಾಪುರ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.
ಜಿಮ್ಸ್‌ನಲ್ಲಿ ದಾಖಲಾಗಿರುವ ರೋಗಿಗಳನ್ನು ಲೋಕಸಭಾ ಸದಸ್ಯ ಉಮೇಶ ಜಾಧವ್ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಜತೆ ಚರ್ಚಿಸಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರನ್ನು ಭೇಟಿ ಮಾಡಿದ ಸಂಸದರು ಗ್ರಾಮದಲ್ಲಿ ಕಲುಷಿತ ನೀರಿನ ಸಮಸ್ಯೆ ಕುರಿತು ಪರಿಶೀಲನೆ ಮಾಡಿ, ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಇದನ್ನೂ ಓದಿ: ರಾಯಚೂರಲ್ಲಿ ಮನೆ ತಾರಸಿ ಕುಸಿದು ಬಾಲಕ ಸಾವು.. ಸಾವಿನ ಮನೆಯಲ್ಲಿ ಮತ್ತೊಂದು ದುರಂತ