ಧಾರವಾಡ: ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಮಂಜುನಾಥ ಬಸವಣ್ಣವರ ಅವರನ್ನು ಆರೋಪಿಗಳನ್ನಾಗಿ ಪರಿಗಣಿಸುವಂತೆ ಕೋರಿ ಗುರುನಾಥಗೌಡ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಸತ್ರ ನ್ಯಾಯಾಲಯ ತಿರಸ್ಕರಿಸಿದೆ.
ಯೋಗೀಶಗೌಡ ಸಹೋದರ ಗುರುನಾಥಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಪರಿಗಣಿಸಲು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಹಾಗೂ ಮಂಜುನಾಥ ಬಸವಣ್ಣವರ ಅವರ ಕೈವಾಡವಿದೆ. ಅವರನ್ನು ಆರೋಪಿಗಳನ್ನಾಗಿ ಪರಿಗಣಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದ ಗುರುನಾಥಗೌಡರು ಹಿನ್ನಡೆ ಅನುಭವಿಸಿದ್ದಾರೆ. ಅಲ್ಲದೆ, ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
2016 ಜೂನ್ 15ರಂದು ಜಿಲ್ಲಾ ಪಂಚಾಯತ್‌ನ ಹೆಬ್ಬಳ್ಳಿ ಕ್ಷೇತ್ರದ ಸದಸ್ಯ ಯೋಗೀಶಗೌಡ ಗೌಡರ ಕೊಲೆಯಾಗಿತ್ತು.