ಧಾರವಾಡ: ದೂರದ ವಿದೇಶದಲ್ಲಿ ಹೋಗಿ ನೆಲೆಸಿರುವ ಭಾರತೀಯರಿಗಾಗಿ ಧಾರವಾಡದ ಕಲಾವಿದನೊಬ್ಬ ವರ್ಚುಯಲ್ ಗಣೇಶೋತ್ಸವ ಆಚರಿಸಿ ಬಳಿಕ ಪರಿಸರ ಸ್ನೇಹಿಯಾಗಿ ಗಣೇಶನ ನಿಮಜ್ಜನ ಮಾಡಿದ್ದಾರೆ.
ಹೌದು, ಧಾರವಾಡದ ಕೆಲಗೇರಿ ಗಾಯತ್ರಿಪುರದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಅನಿವಾಸಿ ಭಾರತೀಯರಿಗಾಗಿ ಸಾಮೂಹಿಕ ವರ್ಚುಯಲ್ ಗಣೇಶೋತ್ಸವ ಆಚರಣೆ ಮಾಡಿ, ಐದು ದಿನಗಳ ಕಾಲ ಅವರ ಹೆಸರಿನಲ್ಲಿ ಪೂಜಿಸಿ ನಿನ್ನೆ ಗಣೇಶನ ನಿಮಜ್ಜನ ಮಾಡಿದ್ದಾರೆ.
ವರ್ಚುಯಲ್ ಗಣೇಶೋತ್ಸವ:
ಕೊರೊನಾ ಕಾರಣದಿಂದ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಈ ಬಾರಿ ತಮ್ಮೂರಿಗೆ ಬಂದು ಗಣೇಶ ಹಬ್ಬ ಆಚರಣೆ ಮಾಡುವುದಕ್ಕೆ ಆಗಿಲ್ಲ. ಹೀಗಾಗಿ ಅನೇಕ ವಿದೇಶದಲ್ಲಿರುವ ಹಿಂದುಗಳಿಗಾಗಿ ಕಲಾವಿದ ಮಂಜುನಾಥ ಹಿರೇಮಠ ಇಲ್ಲಿಂದಲೇ ಹಬ್ಬ ಮಾಡಿಸಿದ್ದಾರೆ.
ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ:
ವಿದೇಶದಲ್ಲಿರುವ ಅನೇಕರ ಹೆಸರಿನಲ್ಲಿ ಇವರು ಸಾಮೂಹಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದು, ಆನ್ಲೈನ್ ಮೂಲಕ ಇಲ್ಲಿಂದಲೇ ಆಯಾ ವಿದೇಶಿಗರ ಹೆಸರಿನಲ್ಲಿ ವರ್ಚುಯಲ್ ಮೂಲಕ ಪೂಜೆ ಮಾಡಿದ್ದಾರೆ. ಸ್ವದೇಶಕ್ಕೆ ಬರಲಾಗದ ಅನೇಕರು ಈಗ ಮಂಜುನಾಥ ಅವರ ಮೂಲಕ ಗಣೇಶನ ಹಬ್ಬವನ್ನು ಆನ್ ಲೈನ್ ನಲ್ಲೇ ಆಚರಣೆ ಮಾಡಿದ್ದಾರೆ.
ಮಂಜುನಾಥರಿಗೆ ನೆರವು:
ಕಳೆದ ವರ್ಷ ಕೊರೊನಾದಿಂದ ಅನೇಕರು ಹಬ್ಬದಿಂದ ದೂರು ಉಳಿದಾಗ ಬುಕ್ಕಿಂಗ್ ಆಗಿದ್ದ ಗಣೇಶ ಮೂರ್ತಿಗಳು ಮಾರಾಟವೇ ಆಗಿರಲಿಲ್ಲ. ಆಗ ಇದೇ ಕಲಾವಿದ ಮಂಜುನಾಥ ಹಿರೇಮಠ ಕಣ್ಣೀರು ಹಾಕುವ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ನೋಡಿದ್ದ ವಿದೇಶದಲ್ಲಿರುವ ಅನೇಕರು ಆಗ ಮಂಜುನಾಥ ಹಿರೇಮಠ ಸಹಾಯಕ್ಕೆ ಬಂದು, ಉಳಿದ ಮೂರ್ತಿಗಳನ್ನು ಹಣ ಕೊಟ್ಟು ಖರೀದಿಸಿ, ಇಲ್ಲೇ ಪೂಜೆ ಮಾಡಿ ಆನ್ ಲೈನ್ ಮೂಲಕ ತೋರಿಸಿ ಅಂತಾ ಹೇಳಿದ್ರು.
ಅದೇ ರೀತಿ ಮಂಜುನಾಥ ಮಾಡಿದ್ದರು. ಈ ವರ್ಷ ಅಂತಹ ಸ್ಥಿತಿ ಇಲ್ಲದೇ ಇದ್ದರೂ ಸಹ ಅನೇಕರು ಸ್ವದೇಶಕ್ಕೆ ಬರಲು ಆಗಿರಲಿಲ್ಲ. ಹೀಗಾಗಿ ಅವರೆಲ್ಲರೂ ವರ್ಚುಯಲ್ ಆಗಿ ತಮ್ಮ ಹೆಸರಿನಲ್ಲಿ ಪೂಜೆ ಮಾಡಿಸಿದ್ದಾರೆ.
ಇದನ್ನೂ ಓದಿ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1.77 ಲಕ್ಷ ಕ್ಯೂಸೆಕ್ ನೀರು: ಆತಂಕದಲ್ಲಿ ನದಿಪಾತ್ರದ ಜನರು
ಸ್ಯಾನ್ ಫ್ರಾನ್ಸಿಸ್ಕೋ, ಫಿಲಾಡೆಲ್ಪಯಾ, ಸ್ಯಾನ್ ಡಿಯಾಗೋ, ಆಸ್ಟ್ರೇಲಿಯಾ, ಸಿಂಗಾಪುರದಲ್ಲಿನ ಅನಿವಾಸಿ ಭಾರತೀಯರು ಪಾಲ್ಗೊಂಡಿರುವುದು ಬಹಳ ವಿಶೇಷವಾಗಿದೆ. ಒಟ್ಟಿನಲ್ಲಿ ದೂರದ ವಿದೇಶದಲ್ಲಿರುವ ಅನಿವಾಸಿ ಭಾರತೀಯರು ಸ್ವದೇಶಕ್ಕೆ ಬಾರದಿದ್ದರೂ ಸಹ ಅಲ್ಲಿಯೇ ಕುಳಿತುಕೊಂಡು ಗಣೇಶ ಹಬ್ಬ ಆಚರಿಸಿದ್ದಾರೆ.