ಹುಬ್ಬಳ್ಳಿ : ನಗರದ ಪ್ರಮುಖ ಪ್ರವಾಸಿತಾಣ ಉಣಕಲ್ ಕೆರೆ ಅಭಿವೃದ್ದಿಗಾಗಿ ಸಾಕಷ್ಟು ಯೋಜನೆ ಹಾಕಲಾಗಿತ್ತು. ಹಲವು ಸಂಘಟನೆಗಳು, ಸಂಘ ಸಂಸ್ಥೆಗಳು ಸಾಕಷ್ಟು ಪರಿಶ್ರಮಪಟ್ಟು ಉಣಕಲ್ ಕೆರೆ ಅಭಿವೃದ್ದಿ ಮಾಡಿದ್ದರು ಕೆರೆ ಮಾತ್ರ ಶುದ್ದವಾಗಲಿಲ್ಲ. ಆದ್ರೆ ಈಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಉಣಕಲ್‌ಕೆರೆ ಸೇರ್ಪಡೆಯಾದ್ರು ಕೆರೆ ಅಭಿವೃದ್ದಿಯಾಗುವುದು ಅನುಮಾನ ಮೂಡಿದೆ.
ಉಣಕಲ್ ಕೆರೆಯಲ್ಲಿ ಬೆಳೆದಿರುವ ಜಲಕಳೆಯನ್ನು ತೆಗೆಯುವ ಕೆಲಸವೇನೋ ಸ್ವಲ್ಪ ಚುರುಕುಗೊಂಡಿದೆ. ಆದರೆ, ಕೆರೆಯಿಂದ ಕಿತ್ತು ತಂದಿದ್ದನ್ನು ರಸ್ತೆ ಬದಿ ಸುರಿಯುತ್ತಿದ್ದು, ‘ಸ್ಮಾರ್ಟ್’ ಅಭಿವೃದ್ಧಿಯು ಸಾರ್ವಜನಿಕರು ಮೂಗು ಮುರಿಯುವಂತೆ ಮಾಡಿದೆ.
ಸದಾ ನೀರಿರಬೇಕಾದ ಕೆರೆಯಲ್ಲಿ ಐಖೋರ್ನಿಯಾ ಕ್ರಾಸಿಪಸ್ ಕಳೆ ದಟ್ಟವಾಗಿ ಹರಡಿದೆ. ಕೆಲವು ಕಡೆಗೆ ಕೆರೆಯೇ ಕಾಣದಂತೆ ವ್ಯಾಪಿಸಿಕೊಂಡಿದೆ. ಇದರ ಮೂಲೋತ್ಪಾಟನೆ ಸೇರಿ ಕೆರೆ ಮತ್ತು ದಂಡೆಯಲ್ಲಿ ಬೇರೆ ಬೇರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸ್ಮಾರ್ಟ್ ಸಿಟಿ ಯೋಜನೆ ಅಡಿ 14 ಕೋಟಿ 83 ಲಕ್ಷ ರೂ. ಮೀಸಲಿಡಲಾಗಿದೆ.
ಬೆಂಗಳೂರಿನ ಜಿ. ನಾಗೇಂದ್ರ ಎನ್ನುವವರು ಟೆಂಡರ್ನಲ್ಲಿ ಈ ಕೆಲಸದ ಗುತ್ತಿಗೆ ಪಡೆದುಕೊಂಡಿದ್ದಾರೆ. ಆದರೇ ಕಿತ್ತಿರುವ ಜಲಕಳೆಯನ್ನು ರಸ್ತೆಗೆ ಹಾಕುತ್ತಿರುವುದು ಉಣಕಲ್ ಕೆರೆಯ ಸೌಂದರ್ಯ ಹಾಳಾಗುವಂತೆ ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.