ಹುಬ್ಬಳ್ಳಿ: ರಾಜ್ಯಾದ್ಯಂತ ಹನುಮ ಜಯಂತಿ ಸಡಗರ ಮನೆ ಮಾಡಿದೆ. ಇದರ ನಡುವೆಯೇ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆಯಂತೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ಮೂರ್ತಿಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡಲು ಮುಂದಾದಾಗ ಅಚ್ಚರಿಯೊಂದು ನಡೆದಿದೆ. ಹನುಮಂತನ ಕಣ್ಣಿನಲ್ಲಿ ಹನಿ ಹನಿ ಕಣ್ಣೀರು ಬರುತ್ತಿರುವ ದೃಶ್ಯ ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.
ನಿರಂತರವಾಗಿ ಹನಿ ಹನಿ ರೂಪದಲ್ಲಿ ಕಣ್ಣಿನಲ್ಲಿ ನೀರು ಬರುತ್ತಿದೆ. ಕಣ್ಣಿನಲ್ಲಿ ನೀರು ನೋಡಿ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಬಟ್ಟೆಯಿಂದ ನೀರು ಒರೆಸಿದರು. ಆದರೆ, ಮತ್ತೆ ಮತ್ತೆ ನೀರು ಜಿನುಗುತ್ತಿದೆಯಂತೆ. ಈ ವಿಷಯ ಬಾಯಿಂದ ಬಾಯಿಗೆ ಹರಡಿ ಹನುಮಂತನ ದರ್ಶನ ಪಡೆಯಲು ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಿದ್ದಾರಂತೆ.
ಹನುಮಂತನ ಕಣ್ಣಿನ ನೀರಿನ ಬಗ್ಗೆ ಹಲವರು ಹಲವು ರೀತಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಕೆಲವರು ಆನಂದ ಭಾಷ್ಪ ಎಂದರೆ, ಇನ್ನು ಕೆಲವರು ಕಣ್ಣೀರು ಎನ್ನುತ್ತಿದ್ದು, ಈ ಅಚ್ಚರಿ ನೋಡಲು ಭಕ್ತರ ದಂಡು ಆಗಮಿಸುತ್ತಿದೆಯಂತೆ.