ಹುಬ್ಬಳ್ಳಿ: ಕೊರೊನಾ ತಡೆಗೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿ, ಪ್ರಧಾನಿ ಮೋದಿ ಅವರ ಪರವಾಗಿ ಧನ್ಯವಾದ ತಿಳಿಸಿದರು.
ಕೊರೊನಾ ತಡೆಗೆ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಬೆಂಬಲಿಸುವ ಮತ್ತು ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಎಂದು ಪ್ರಧಾನಿ ಮೋದಿ ಅವರು ಸಚಿವರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ನಗರದ ವೈದ್ಯ ಸಚಿನ್ ಹೊಸಕಟ್ಟಿ ಅವರಿಗೆ ಕರೆ ಮಾಡಿ ಧನ್ಯವಾದ ಅರ್ಪಿಸಿದರು.
ಧಾರವಾಡ ಜಿಲ್ಲೆಯಲ್ಲಿ ವೈದ್ಯರ ಶ್ರಮದ ಫಲವಾಗಿ ಕೊರೊನಾ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ. ನಿಮ್ಮೆಲ್ಲರಿಗೂ ವೈಯಕ್ತಿಕ ಹಾಗೂ ಪ್ರಧಾನಿ ಅವರ ಪರವಾಗಿ ಅಭಿನಂದನೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರ ಕರೆಗೆ ಪ್ರತಿಕ್ರಿಯಿಸಿದ ಸಚಿನ್ ಹೊಸಕಟ್ಟಿ ಅವರು, ಸರ್ಕಾರದ ಸಹಕಾರದಿಂದ ವೈದ್ಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲರ ಬೆಂಬಲದಿಂದ ಕೊರೊನಾ ವಿರುದ್ಧ ನಾವು ಗೆಲ್ಲುತ್ತೇವೆ ಎಂದು ಭರವಸೆ ನೀಡಿದರು.