ಹುಬ್ಬಳ್ಳಿ: ಸರ್ಕಾರಿ ಬಸ್ ಚಾಲಕನ ಮೇಲೆ ಪ್ರಯಾಣಿಕರು ಹಲ್ಲೆ ನಡೆಸಿದ ಘಟನೆ ಕಲಘಟಗಿ ಬಸ್ ನಿಲ್ದಾಣದಲ್ಲಿ ನಿನ್ನೆ ಸಾಯಂಕಾಲ ನಡೆದಿದೆ.
ಬಸವರಾಜ್ ಚಾಕರಿ ಹಿಗ್ಗಾಮುಗ್ಗಾ ಥಳಿಸಿಕೊಂಡ ಸರ್ಕಾರಿ ಬಸ್ ಚಾಲಕ. ಕಲಘಟಗಿಯಲ್ಲಿ ನಿನ್ನೆ ಸಂತೆ ಇತ್ತು. ಸಂತೆ ಮುಗಿಸಿ ಊರು ಕಡೆ ಹೋಗಲು ಬಸ್ ನಿಲ್ದಾಣದ ಬಳಿ ಜನರು ಬಂದಿದ್ದಾರೆ. ಆದ್ರೆ, ಕಲಘಟಗಿಗೆ ಹೋಗಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಜನರು ಕಂಟ್ರೋಲರ್ಗೆ ಮನವಿ ಮಾಡಿ, ಬಸ್ ಬಿಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಕಂಟ್ರೋಲರ್ ಸಹ ಒಪ್ಪಿಗೆ ಸೂಚಿಸಿ, ಹುಬ್ಬಳ್ಳಿಗೆ ಹೋಗುವ ಬಸ್ ಅನ್ನು ನಿಮ್ಮ ಊರಿಗೆ ಬಿಡ್ತೀವಿ ಅಂತಾ ಹೇಳಿದ್ದಾರೆ. ಪರಿಣಾಮ ಆ ಭಾಗದ ಎಲ್ಲ ಜನರು ಸಹ ಬಸ್ ಏರಿ ಕುಳಿತಿದ್ದಾರೆ.
ದುರಾದೃಷ್ಟವೆಂದ್ರೆ ಕಂಟ್ರೋಲರ್ ಹಾಗೂ ಸಾರ್ವಜನಿಕರ ನಡುವಿನ ಮಾತಿನ ವಿಚಾರ ಚಾಲಕನಿಗೆ ಗೊತ್ತಿಲ್ಲ. ಚಾಲಕ ಬಸ್ ನಿಲ್ಲಿಸಿ, ಚಹಾ ಕುಡಿಯಲು ಹೋಗಿ ಬರುವುದರೊಳಗೆ ಬಸ್ ತುಂಬಿತ್ತು. ನಂತರ ಬಂದ ಚಾಲಕ ಇಲ್ಲ ಸರ್, ಇದು ನಿಮ್ಮ ಊರಿನ ಕಡೆ ಹೋಗುವ ಬಸ್ ಅಲ್ಲ, ಬದಲಿಗೆ ಹುಬ್ಬಳ್ಳಿಗೆ ಹೋಗುವ ಬಸ್ ಅಂದಿದ್ದಾನೆ. ಅಷ್ಟರಲ್ಲೇ ಬಸ್ನಲ್ಲಿ ಕೂತಿದ್ದ ಕೆಲವೊಂದಿಷ್ಟು ಮದ್ಯಸೇವನೆ ಮಾಡಿದವರು ಚಾಲಕನಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಹೀಗೆ ಚಾಲಕ - ಸಾರ್ವಜನಿಕರ ನಡುವೆ ಮಾತಿಗೆ ಮಾತು ಬೆಳೆದು, ಕೂಡಲೇ ಮದ್ಯ ಸೇವನೆ ಮಾಡಿದ ಕೆಲ ಪ್ರಯಾಣಿಕರ ಗುಂಪು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಅಲ್ಲಿಂದ ಕಾಲು ಕಿತ್ತಿದ್ದಾರೆ.
ಇನ್ನು ಸ್ಥಳೀಯರು ಚಾಲಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಚಾಲಕ ಕಲಘಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ದೂರನ್ನು ಸ್ವೀಕರಿಸಿಲ್ಲ ಎಂದು ಚಾಲಕ ಆರೋಪಿಸಿದ್ದಾನೆ.