ಹುಬ್ಬಳ್ಳಿ: ಮಕ್ಕಳಿಗೆ ಸ್ವರಗಳನ್ನು ಹೇಳಿ ಕೊಡುತ್ತಾ, ವಿಶಿಷ್ಟ ತಬಲಾ ಕಲಿಸುತ್ತಿರುವ ಇವರ ಹೆಸರು ಚೇತನಕುಮಾರ ಹಿನಾಮದಾರ. ನಗರದ ದೇವಾಂಗ ಪೇಟೆಯ ನಿವಾಸಿ. ತಬಲಾ ಮೇಲೆ ಇವರು ಬೆರಳುಗಳನ್ನು ಹೊರಳಿಸಲು ಆರಂಭಿಸಿದರೆ, ಅದು ಹೊಮ್ಮಿಸುವ ನಾದಕ್ಕೆ ಸಂಗೀತ ಪ್ರಿಯರು ತಲೆದೂಗದಿರಲು ಸಾಧ್ಯವಿಲ್ಲ.
ತಬಲಾ ವಾದನ ಕಲೆಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡಿರುವ ಚೇತನಕುಮಾರ್‌ಗೆ ವಿಭಿನ್ನವಾಗಿ ನಾದ ಹೊರಡಿಸುವ ಕಲೆ ಕರಗತವಾಗಿದೆ. ಇದೇ ಕ್ಷೇತ್ರದಿಂದ ಈಗ ಗಿನ್ನಿಸ್ ದಾಖಲೆ ಮಾಡಿ ವಾಣಿಜ್ಯ ನಗರಿಯ ಕೀರ್ತಿ ಹೆಚ್ಚಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ರವಿಶಂಕರ ಗುರೂಜಿ ಅವರ ನೇತೃತ್ವ ಹಾಗೂ ಡಾ. ಅರವಿಂದ ಕುಮಾರ ಅಜಾದ ಕಲಿಕಾ ಪ್ರೇರಣೆ ಇವರಿಗಿದೆ. ಸೊಲ್ಲಾಪುರದಲ್ಲಿ ನಡೆದ ತಾಲ ನಿನಾದ್ ಕಾರ್ಯಕ್ರಮದಲ್ಲಿ ಸತತ ನಾಲ್ಕು ಘಂಟೆಗಳ ಕಾಲ ವಿಭಿನ್ನವಾಗಿ ತಬಲಾ ನಾದಹೊಮ್ಮಿಸಿ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
ಯಾರ ಬಳಿಯೂ ಶುಲ್ಕ ಪಡೆಯದೇ ತಾವು ಕಲಿತ ವಿದ್ಯೆಯನ್ನು ಮಕ್ಕಳಿಗೆ ಕಲಿಸುವುದರ ಜೊತೆಗೆ ತಮ್ಮ ಹಾಗೆ ಎಲ್ಲರೂ ಸಾಧನೆ ಮಾಡಲಿ ಎಂಬ ಆಸೆ ಇವರದ್ದು. ಅಷ್ಟೇ ಅಲ್ಲದೇ ಇನ್ಫೋಸಿಸ್ ಫೌಂಡೇಶನ್ ನೇತಾರರಾದ ಸುಧಾಮೂರ್ತಿ ಅವರ ನೇತೃತ್ವದಲ್ಲಿ ನಡೆದ ಧಾರವಾಡ ಉತ್ಸವ, ಹಂಪಿ ಉತ್ಸವ ಹೀಗೆ ಹಲವಾರು ಉತ್ಸವಗಳಲ್ಲಿ ತಬಲಾ ನುಡಿಸಿ ವಿಭಿನ್ನವಾಗಿ ತಮ್ಮ ಕಲೆಯ ಪ್ರದರ್ಶನ ಮಾಡಿದ್ದಾರೆ.