ಹುಬ್ಬಳ್ಳಿ : 76 ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವ ಉತ್ತರ ಕರ್ನಾಟಕದ ಬಹುದೊಡ್ಡ ಆಸ್ಪತ್ರೆ ಹಾಗೂ ಬಡವರ ಸಂಜೀವಿನಿ ಹುಬ್ಬಳ್ಳಿಯ ಕಿಮ್ಸ್ ಈಗ ಮತ್ತೊಂದು ಸಾಧನೆಗೈದಿದೆ.
ಕೋವಿಡ್ 2ನೇ ಅಲೆ ಅನೇಕ ಜನರನ್ನು ಬಾಧಿಸಿ ಪ್ರಾಣಾಪಾಯ ತಂದೊಡ್ಡಿತು. ಅಲ್ಲದೇ ಕೋವಿಡ್ನಿಂದ ಗುಣಮುಖರಾದರೂ ಬ್ಲ್ಯಾಕ್ ಫಂಗಸ್ ಪೀಡಿತರು ಅಧಿಕ ಸಂಖ್ಯೆಯಲ್ಲಿ ಕಂಡು ಬಂದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಚಿಕಿತ್ಸೆಗೆ ಮೊರೆಹೋದರು. ಈ ಮಧ್ಯೆ ಕಿಮ್ಸ್ನ ಬಾಯಿ ಮತ್ತು ಮುಖ ಶಸ್ತ್ರ ಚಿಕಿತ್ಸಾ ವಿಭಾಗ 76 ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ.
ಕೊರೊನಾದಿಂದ ಗುಣಮುಖರಾದವರಿಗೆ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಡಲಾರಂಭಿಸಿತು. ಕಪ್ಪು ಶಿಲೀಂಧ್ರ ಹೆಚ್ಚಾಗಿ ಮುಖ, ಬಾಯಿಗೆ ಹರಡುತ್ತಿರುವ ಸಂದರ್ಭದಲ್ಲಿ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅವರ ನಿರ್ದೇಶನದ ಮೇರೆಗೆ ಬಾಯಿ ಮತ್ತು ಮುಖ ಶಸ್ತ್ರ ಚಿಕಿತ್ಸಾ ಘಟಕದ ತಜ್ಞ ವೈದ್ಯ ಡಾ. ಮಂಜುನಾಥ ವಿಜಾಪುರ ಅವರು ಕಿವಿ, ಮೂಗು, ಗಂಟಲು, ಕಣ್ಣಿನ ತಜ್ಞ ವೈದ್ಯರ ಸಹಕಾರದಿಂದ ಘಟಕದ ಸೀನಿಯರ್ ರೆಸಿಡೆಂಟ್ ಡಾ. ಅನುರಾಧಾ ನಾಗನಗೌಡ್ರ, ವಸಂತ ಕಟ್ಟಿಮನಿ, ತೇಜಸ್ ಯಳಮಲಿ, ಸ್ನಾತಕೋತ್ತರ ತರಬೇತಿಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳ ತಂಡ ರಚಿಸಿಕೊಂಡರು. ಈ ತಂಡ ಜೂನ್ 21ರಿಂದ ಸೆಪ್ಟೆಂಬರ್ 21ರವರೆಗೆ 140 ಬ್ಲ್ಯಾಕ್ ಫಂಗಸ್ ರೋಗಿಗಳ ಪೈಕಿ 76 ಜನರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಜೀವ ಉಳಿಸಿ ಬಡವರ ಪಾಲಿಗೆ ಆತ್ಮಬಂಧುವಿನಂತಾಗಿದೆ.
ಲಕ್ಷಾಂತರ ರೂಪಾಯಿ ಖರ್ಚಾಗುವಂತಹ ಈ ಸರ್ಜರಿ ಸೇವೆಯನ್ನು ಇಲ್ಲಿ ಮಾತ್ರ ಸಂಪೂರ್ಣ ಉಚಿತ ನೀಡಲಾಗುತ್ತದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪೈಕಿ ಉತ್ತರಕರ್ನಾಟಕ ಭಾಗದಲ್ಲಿಯೇ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಮಾತ್ರ ಈ ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸೆ ವಿಭಾಗ ಇರುವುದು ಎನ್ನುವುದು ವಿಶೇಷ. ಈ ಹಿನ್ನೆಲೆ ಹಾವೇರಿ, ಕೊಪ್ಪಳ, ಶಿರಸಿ, ಹಳಿಯಾಳ, ಬೆಳಗಾವಿ, ಗಂಗಾವತಿ, ಕಾರವಾರ, ಬಳ್ಳಾರಿ, ಬಾಗಲಕೋಟೆ, ವಿಜಯಪುರ ಸೇರಿ ಮುಂತಾದ ಕಡೆಗಳಿಂದ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರೆಳಿದ್ದಾರೆ.
ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಕ್ಕೆ ನಿಂತ ಪಂಚಮಸಾಲಿ ಸಮಾಜ: ಸಂಜಯ್ ಪಾಟೀಲ್ ವಿರುದ್ಧ ಕ್ರಮಕ್ಕೆ ಆಗ್ರಹ
ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚಾದಾಗ ನಮ್ಮ ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸೆ ಘಟಕ ನಿರಂತರವಾಗಿ ರೋಗಿಗಳ ಆರೈಕೆ ಮಾಡಿದೆ. ಅದರಲ್ಲೂ 60ಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟವಾಗಿತ್ತು.
ಫಂಗಸ್ ಬಾಯಿ, ಮುಖಕ್ಕೆ ಹರಡಿದಾಗ ನಮ್ಮ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸಾ ಘಟಕದ ಡಾ. ಮಂಜುನಾಥ ವಿಜಾಪುರ ಅವರ ನೇತೃತ್ವದಲ್ಲಿ 74 ಜನರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಜೀವ ನೀಡಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಹೇಳಿದರು.