ಹುಬ್ಬಳ್ಳಿ: ಮಳೆ ಹಾಗೂ ಕೋವಿಡ್ ಪರಿಸ್ಥಿತಿಯಲ್ಲೂ ನೈರುತ್ಯ ರೈಲ್ವೆಯು ಪಾರ್ಸಲ್ ಸೇವೆಯ ಮೂಲಕ ಉತ್ತಮ ಆದಾಯ ಗಳಿಸಿದೆ.
ನೈರುತ್ಯ ರೈಲ್ವೆಯ ನವೆಂಬರ್ 2021ರಲ್ಲಿ ರೂ.10.42 ಕೋಟಿ ಪಾರ್ಸಲ್ ಆದಾಯವನ್ನು ದಾಖಲಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಆದಾಯ (6.63 ಕೋಟಿ)ಕ್ಕಿಂತ ಶೇ. 57.1 ರಷ್ಟು ಹೆಚ್ಚಾಗಿದೆ. ಏಪ್ರಿಲ್ 2021 ರಿಂದ ನವೆಂಬರ್ 2001ರವರೆಗೆ ಒಟ್ಟು ಆದಾಯ ರೂ. 79.68 ಕೋಟಿಯಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಯ ಆದಾಯ (31.97ಕೋಟಿ) ಕ್ಕಿಂತ ಶೇ.149.26 ರಷ್ಟು ಹೆಚ್ಚಾಗಿದೆ.
ನೈರುತ್ಯ ರೈಲ್ವೆಯು 6 ಎನ್ಎಂಜಿ ರೇಕುಗಳನ್ನು ಸಾಗಿಸಿದ್ದು, ಇವುಗಳಲ್ಲಿ ಮೂರು ನಂಜನಗೂಡಿನಿಂದ ಆಗ್ನೇಯ ರೈಲ್ವೆಯ ಖರಗಪುರ ವಿಭಾಗದಲ್ಲಿರುವ ಸಂಕ್ರೈಲ್ ಗೂಡ್ಸ್ ಯಾರ್ಡ್ಗೆ ಹಾಗೂ ಇನ್ನು ಮೂರು ವಾಸ್ಕೋ ಡ ಗಾಮ ದಿಂದ ಉತ್ತರ ರೈಲ್ವೆಯ ದೆಹಲಿ ವಿಭಾಗದ ಇನ್ ಲ್ಯಾಂಡ್ ಕಂಟೈನರ್ ಡಿಪೋಗೆ ಒಟ್ಟು 1.36 ಟನ್ ತೂಕದ ಟೈಯರ್ಗಳು ಹಾಗೂ ನೆಸ್ಲೆ ಉತ್ಪನ್ನಗಳ ಸರಕುಗಳೊಂದಿಗೆ ಸಾಗಿಸಲ್ಪಟ್ಟಿದೆ. ಇದರಿಂದ 0.763 ಕೋಟಿ ಆದಾಯ ಗಳಿಕೆ ಆಗಿದೆ. ಆಟೋಮೊಬೈಲ್ ಉತ್ಪನ್ನ ತಯಾರಕರಿಗೆ ರೈಲು ಸಾರಿಗೆ ವಿಶ್ವಾಸಾರ್ಹ ನೆಚ್ಚಿನ ಸಾರಿಗೆಯಾಗಿ ಹೊರಹೊಮ್ಮುತ್ತಿದೆ.
ನವೆಂಬರ್ನಲ್ಲಿ ನೈರುತ್ಯ ರೈಲ್ವೆಯಿಂದ 9 ಗುತ್ತಿಗೆ ನೀಡಿದ ಪಾರ್ಸಲ್ ಕಾರ್ಗೋ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಯಶವಂತಪುರದಿಂದ ದೆಹಲಿಯ ಇನ್ ಲ್ಯಾಂಡ್ ಕಂಟೈನರ್ ಡಿಪೋಗೆ ಸಂಚರಿಸಲಾಗಿದ್ದು, 3.29 ಟನ್ ಸರಕು ಸಾಗಣೆಯೊಂದಿಗೆ 1.222 ಕೋಟಿ ಆದಾಯ ಗಳಿಕೆ ಆಗಿದೆ. ಇದು ಸಣ್ಣ ಪ್ರಮಾಣದ ಕೈಗಾರಿಕೆಗಳು, ವ್ಯಾಪಾರಿಗಳು, ಬೆಂಗಳೂರು ವಲಯದ ಉತ್ಪಾದಕರಿಗೆ ಉತ್ಪನ್ನಗಳನ್ನು ದೇಶದ ವಿವಿಧೆಡೆಗೆ ಸಾಗಿಸಲು ಸಹಾಯ ಮಾಡುತ್ತಿದೆ.
ವಾಸ್ಕೋ ಡ ಗಾಮದಿಂದ ಮಧ್ಯ ರೈಲ್ವೆ ನಾಗಪುರ ವಿಭಾಗದ ಕಲ್ಮೇಶ್ವರಕ್ಕೆ 0.218ಟನ್ ಗಳಷ್ಟು ನೆಸ್ಲೆ ಉತ್ಪನ್ನಗಳು ಹಾಗೂ ಟೈರ್ಗಳನ್ನೊಳಗೊಂಡ ಒಂದು ಇನ್ಡೆನ್ಟೆಡ್ ಜಿಎಸ್ ವಿಶೇಷ ಪಾರ್ಸೆಲ್ ರೈಲನ್ನು ರವಾನಿಸಿದ್ದು, 0.106 ಕೋಟಿ ಆದಾಯ ಲಭಿಸಿದೆ.
ವಾಸ್ಕೋ ಡ ಗಾಮದಿಂದ ಗುವಾಹಟಿಗೆ ಮತ್ತು ಕೆಎಸ್ಆರ್ ಬೆಂಗಳೂರಿನಿಂದ ದೀಮಾ ಪುರಕ್ಕೆ ಎಕ್ಸ್ ಪ್ರೆಸ್ ರೈಲುಗಳು 1.078 ಟನ್ಗಳಷ್ಟು ನೆಸ್ಲೆ ಉತ್ಪನ್ನಗಳು ಹಾಗೂ ಇತರ ವಸ್ತುಗಳೊಂದಿಗೆ ಸಂಚರಿಸಿದ್ದರಿಂದ 78.5 ಲಕ್ಷ ಆದಾಯ ಬಂದಿದೆ.
ಮಳೆ, ಕೋವಿಡ್ ಮಧ್ಯೆಯೂ ಸೇವೆ:
ಕೋವಿಡ್- 19 ರ ಪ್ರತಿಕೂಲ ವಾತಾವರಣ ಹಾಗೂ ನಿರಂತರ ಮಳೆ ಪರಿಸ್ಥಿತಿಯ ಸವಾಲುಗಳನ್ನು ಎದುರಿಸಿಯೂ ನೈಋತ್ಯ ರೈಲ್ವೆಯು ಸರಕು ಸಾಗಣೆಯಲ್ಲಿ ನವೆಂಬರ್ 2021ರಲ್ಲಿ ಉತ್ತಮ ಸಾಧನೆ ಮಾಡಿದೆ. ಉದ್ಯಮಗಳಿಗೆ ಕಚ್ಚಾವಸ್ತು ಹಾಗೂ ಅವಶ್ಯಕ ವಸ್ತುಗಳ ನಿರಂತರ ಪೂರೈಕೆಯು ಅಡೆತಡೆಯಿಲ್ಲದೆ ಸಾಗುವುದನ್ನು ಖಚಿತಪಡಿಸುವಲ್ಲಿ ರೈಲ್ವೆ ಶ್ರಮಿಸುತ್ತಿದೆ.
ಏಪ್ರಿಲ್ 2021ರಿಂದ ನವೆಂಬರ್ 2021ರ ವರೆಗೆ ಕಲ್ಲಿದ್ದಲಿನ ಲೋಡಿಂಗ್ನಲ್ಲಿ ಶೇ.2.1ರ ಏರಿಕೆಯನ್ನು ದಾಖಲಿಸಿದೆ. ಈ ಅವಧಿಯಲ್ಲಿ ನೈಋತ್ಯ ರೈಲ್ವೆಯು 5.95 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲನ್ನು ಸಾಗಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5.83 ಮಿಲಿಯನ್ ಟನ್ಗಳಷ್ಟು ಸಾಗಣೆಯಾಗಿತ್ತು.
ಇದೇ ರೀತಿಯಾಗಿ ಪಿಗ್ ಐರನ್ ಹಾಗೂ ಸಿದ್ಧಪಡಿಸಿದ ಸ್ಟೀಲ್ನ ಶೇ.12.9 ರ ಏರಿಕೆ ದಾಖಲಾಗಿದೆ. ಏಪ್ರಿಲ್ 2021ರಿಂದ ನವೆಂಬರ್ 2021ರ ವರೆಗೆ 5.43 ಮಿಲಿಯನ್ ಟನ್ಗಳಷ್ಟು ಸಾಗಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 4.81 ಮಿಲಿಯನ್ ಟನ್ ಸಾಗಿಸಲಾಗಿತ್ತು.
ಕಂಟೈನರ್ಗಳ ಸಂಚಾರದಲ್ಲೂ ನೈಋತ್ಯ ರೈಲ್ವೆಯು ಪ್ರಗತಿ ಸಾಧಿಸಿದೆ. ಏಪ್ರಿಲ್ 2021 ರಿಂದ ನವೆಂಬರ್ 2021ರವರೆಗೆ ಶೇ.30.8 ರ ಏರಿಕೆಯನ್ನು ದಾಖಲಿಸಿದ್ದು, 0.51 ಮಿಲಿಯನ್ ಟನ್ಗಳ ಲೋಡಿಂಗ್ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 0.39 ಮಿಲಿಯನ್ ಟನ್ ಲೋಡಿಂಗ್ ಮಾಡಲಾಗಿತ್ತು.
ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ಕೋವಿಡ್-19 ಹಾಗೂ ಮಾನ್ಸೂನ್ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಪಾರ್ಸಲ್ ಹಾಗೂ ಸರಕುಗಳ ಲೋಡಿಂಗ್ನಲ್ಲಿನ ಉತ್ತಮ ಸಾಧನೆಗಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ನೈರುತ್ಯ ರೈಲ್ವೆ ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.