ಹುಬ್ಬಳ್ಳಿ: ಹುಬ್ಬಳ್ಳಿ ಉತ್ತರ ಕರ್ನಾಟಕದ ಬಹುದೊಡ್ಡ ವ್ಯಾಪಾರಿ ಕೇಂದ್ರ. ಅಕ್ಕಪಕ್ಕದ ಜಿಲ್ಲೆಗಳಿಂದ ಸಾವಿರಾರು ಜನರು ನಿತ್ಯ ನಗರಕ್ಕೆ ಬರ್ತಾರೆ. ಹೀಗೆ ಬಂದವರು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು.
ಒಂದು ಸಾವಿರ ಕೋಟಿ ರೂ. ಮೊತ್ತದಲ್ಲಿ ಅವಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳು ಆರಂಭವಾಗಿದ್ದು, ಆಮೆಗತಿಯ ವೇಗ ಪಡೆದುಕೊಂಡಿದೆ. ನಗರಾಭಿವೃದ್ಧಿ ಸಚಿವರಾಗುತ್ತಿದ್ದಂತೆ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಸಚಿವ ಭೈರತಿ ಬಸವರಾಜ್, ಕಾಮಗಾರಿ ಬೇಗ ಮುಗಿಸುವಂತೆ ಗುತ್ತಿಕೆದಾರರಿಗೆ ಗಡುವು ನೀಡಿದ್ದರು.
ಜೂನ್ 30ರಂದು ಸಹ ನಗರ ಸಂಚಾರ ಮಾಡಿದ ಸಚಿವರು ಕಾಮಗಾರಿ ಇನ್ನೂ ಮುಗಿಯದಿರುವುದನ್ನು ಕಂಡು ಇನ್ನೆರಡು ತಿಂಗಳಲ್ಲಿ ಮುಗಿಸುವಂತೆ ಎಚ್ಚರಿಕೆ ನೀಡಿದ್ದಾರೆ.
ಭೈರತಿ ಬಸವರಾಜ್ ಪ್ರತಿ ಸಲ ಹುಬ್ಬಳ್ಳಿಗೆ ಬಂದಾಗಲೂ 20 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ತೋಳನಕೆರೆ ಕಾಮಗಾರಿ, 13.31 ಕೋಟಿ ವೆಚ್ಚದ ಗ್ಲಾಸ್ ಹೌಸ್ ಕಾಮಗಾರಿ, 47.92 ಕೋಟಿ ವೆಚ್ವದ ಸ್ಮಾರ್ಟ್ ರಸ್ತೆ, ಜನತಾ ಬಜಾರ್ ಸೇರಿದಂತೆ ವಿವಿಧ ಕಾಮಗಾರಿ ವೀಕ್ಷಣೆ ಮಾಡ್ತಾರೆ. ಆದ್ರೆ ಕಾಮಗಾರಿ ಮಾತ್ರ ಮುಗಿಯುತ್ತಿಲ್ಲ.
ಇದುವರೆಗೆ ಹುಬ್ಬಳ್ಳಿಗೆ ಆರು ಸಲ ಭೇಟಿ ನೀಡಿರುವ ಸಚಿವರು ಬಂದಾಗಲೆಲ್ಲ ತಿಂಗಳ ಗಡುವು ನೀಡಿ ಹೋಗುತ್ತಿರುವುದು ಜನರ ನಗೆಪಾಟಲಿಗೀಡಾಗಿದೆ. ಗ್ಲಾಸ್ಹೌಸ್ನಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಅವಳಿ ನಗರದ ಇತಿಹಾಸ ಹೇಳಬೇಕಿದ್ದ ಕಾರಂಜಿ ಸಚಿವರು ಬಂದಾಗ ಮಾತ್ರ ಕೆಲ ಹೊತ್ತು ಚಿಮ್ಮುತ್ತದೆ. ಹೀಗಾಗಿ, ಜನರು ಸಚಿವರು ಬಂದಾಗ ಚಿಮ್ಮುವ ಕಾರಂಜಿ ಎಂದೇ ವ್ಯಂಗ್ಯವಾಡುತ್ತಿದ್ದಾರೆ.
ಇದನ್ನೂ ಓದಿ: Bigg Boss: ನಿನ್ನ ಫ್ಯಾನ್ಸ್ Vote ಮಾಡುವುದಿಲ್ಲ, ನಾನು ಹೊರಗೆ ಹೋಗುತ್ತೇನೆ ಎಂದ ದಿವ್ಯಾ ಸುರೇಶ್