ಹುಬ್ಬಳ್ಳಿ: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಒದಗಿಸುವ ಹಿನ್ನೆಲೆಯಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುಂತೆ ಡಿ.10ರಂದು ನಗರದ ಮುಖ್ಯ ಅಂಚೆ ಇಲಾಖೆ ಎದುರು ಅಂಚೆ ಮೂಲಕ ಪತ್ರ ಚಳವಳಿ ಮಾಡಲಾಗುವುದು. ಮುಂದಾಳತ್ವವನ್ನು ನಟ ಶಿವರಾಜ್ಕುಮಾರ್ ವಹಿಸುವಂತೆ ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮನವಿ ಮಾಡಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ಕಳೆದ 33 ವರ್ಷಗಳಿಂದ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ, ಹೋರಾಟ ಮಾಡುತ್ತಿದ್ದೇವೆ. ಆದರೆ, ಯಾವುದೇ ಒಂದು ಸರ್ಕಾರ ವರದಿ ಜಾರಿಗೆ ಮನಸ್ಸು ಮಾಡಲಿಲ್ಲ. ಅಲ್ಲದೇ 2017ರಲ್ಲಿ ವರದಿಯನ್ನು ಪರಿಷ್ಕೃತ ಮಾಡಲಾಗಿದ್ದು, ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ, ನಂತರ ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಕೂಡಾ ವರದಿ ಜಾರಿಗೆ ಮಾಡಲು ಮುಂದಾಗಲಿಲ್ಲ. ಪರಿಣಾಮ ಇಲ್ಲಿಯವರೆಗೂ ಕೂಡಾ ವರದಿ ಜಾರಿಯಾಗದೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಾದರೂ ವರದಿ ಜಾರಿಗೆ ಮುಂದಾಗಬೇಕು ಆಗ್ರಹಿಸಿ ಚಳವಳಿ ಹಮ್ಮಿಕೊಳ್ಳಲಾಗಿದೆ.
ಮೀಸಲಾತಿ ವಿಚಾರವಾಗಿ ಆಂಧ್ರಪ್ರದೇಶದಲ್ಲಿ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಿದ್ದಾರೆ. ಅದೇ ರೀತಿ, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಕೂಡಾ ಶೇ.80 ರಷ್ಟು ಮೀಸಲು ಜಾರಿಗೆ ತರುವ ಮೂಲಕ ರಾಜ್ಯದ ಜನರ ಹಿತರಕ್ಷಣೆ ಮಾಡಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಮೀಸಲಾತಿಯನ್ನು ಈಗಿರುವ ಸರ್ಕಾರ ಜಾರಿಗೆಗೊಳಿಸಬೇಕು. ಹೀಗಾಗಿ ಸರ್ಕಾರದ ಮೇಲೆ ಒತ್ತಡ ಹಾಕುವ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ನೇತೃತ್ವ ವಹಿಸಬೇಕೆಂದು ಪತ್ರ ಚಳವಳಿ ಮಾಡಲಾಗುತ್ತಿದೆ.
ಈ ಮೂಲಕ ಕರ್ನಾಟಕದ ನಟರಾದ ಯಶ್, ಸುದೀಪ್,ಪುನೀತ್ ರಾಜ್ಕುಮಾರ್, ದರ್ಶನ್, ಉಪೇಂದ್ರ, ರವಿಚಂದ್ರನ್ ಅವರಿಗೆ ಪತ್ರ ಕಳಿಸುವ ಮೂಲಕ ಒತ್ತಾಯ ಮಾಡಲಾಗುವುದು ಎಂದರು.