ಹುಬ್ಬಳ್ಳಿ: ಸಿದ್ದೇಶ್ವರ ಪಾರ್ಕ್ನಲ್ಲಿನ ಸೇಂಟ್ ಅಂಥೋನಿ ಶಾಲೆ 2019-20ನೇ ಸಾಲಿನಿಂದ ದಿಢೀರ್ ಶಾಲಾ ಶುಲ್ಕವನ್ನು ಹೆಚ್ಚಿಸಿ ಪಾಲಕರ ಮೇಲೆ ಆರ್ಥಿಕ ಹೊರೆ ಹಾಕಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು ಮೊದಲೇ ಕೊರೊನಾ ಭೀತಿಯಿಂದ ಕೆಲಸವಿಲ್ಲದೇ ಪರದಾಟ ನಡೆಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳ ಶಾಲಾ ಶುಲ್ಕದಲ್ಲಿ ವಿನಾಯಿತಿ ನೀಡದೇ ಮತ್ತಷ್ಟು ಏರಿಕೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
2018-19ನೇ ಸಾಲಿನಲ್ಲಿ ಶಾಲೆ ₹12 ಸಾವಿರ ಇದ್ದ ಫೀ ಈಗ ₹18 ಸಾವಿರಕ್ಕೆ ಹೆಚ್ಚಿಸಿ, ಪಾಲಕರಿಗೆ ಹೊರೆ ಹಾಕಿದ್ದು ಖಂಡನೀಯ. ಈ ಬಗ್ಗೆ ಉಪನಿರ್ದೇಶಕರು, ಜಿಲ್ಲಾಧಿಕಾರಿ ಗಮನಕ್ಕೆ ತಂದು ಡಿಇಆರ್ಎ ಕಮಿಟಿಯ ಮುಂದೆ ಚರ್ಚಿಸಿ, ಅಪರ ಆಯುಕ್ತರ ಕೋರ್ಟ್‌ನಲ್ಲಿ ಆಡಳಿತ ಮಂಡಳಿಯವರಿಗೆ ಮನವಿ ಕೊಡುವುದಾಗಿ ತಿಳಿಸಲಾಗಿತ್ತು. ಅದರಂತೆ ಮನವಿ ಕೊಟ್ಟಾಗ ಶಾಲಾ ಶುಲ್ಕದಲ್ಲಿ ಆರು ಜನರಿಗೆ ರಿಯಾಯಿತಿ ಪತ್ರ ಕೊಟ್ಟಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಪ್ರಾಚಾರ್ಯರು ಎಲ್ಲ ಮಕ್ಕಳಿಗೂ ಶುಲ್ಕದಲ್ಲಿ ರಿಯಾಯಿತಿ ಕೊಡಬೇಕಾದ್ರೆ ಮನವಿ ಪತ್ರ ನೀಡಿ ಎಂದಿದ್ದರು. ಅದರಂತೆ ಮನವಿ ಕೊಟ್ಟಿದ್ರೂ ಕೂಡ ಈವರೆಗೆ ಯಾವುದೇ ರಿಯಾಯಿತಿ ಕೊಟ್ಟಿಲ್ಲ. ಹೀಗಾಗಿ ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಪಾಲಕರ ಆರ್ಥಿಕ ಹೊರೆ ಕಡಿಮೆ ಮಾಡಬೇಕು ಇಲ್ಲದಿದ್ರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಎಂದು ಎಚ್ಚರಿಸಿದ್ರು.