ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದು ಬಹಳ ಸಮಸ್ಯೆಯಾಗಿದೆ. ಸಿಎಲ್‌ಪಿ ನಾಯಕರು ಸಭೆ ಮಾಡಿದ್ದಾರೆ. ಹಾನಿಯಾದ ಪರಿಹಾರ ಸರ್ಕಾರದಿಂದ ಪಡೆಯಲು ಪ್ರಯತ್ನ ಮಾಡ್ತೇವೆ. ಹಿಂದೆ ಕೂಡಾ ಪರಿಹಾರಕ್ಕಾಗಿ ನಮ್ಮ ಪಕ್ಷ ಸರ್ಕಾರಕ್ಕೆ ಆಗ್ರಹಿಸಿತ್ತು. ಆದರೆ ಸರ್ಕಾರ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ರು.
ನಗರದಲ್ಲಿಂದು ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಕಾಂಗ್ರೆಸ್ ಕೇರ್ ಕಿಟ್ಗಳನ್ನು ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಪ್ರವಾಹ ಬಂದು, ಬೆಳಗಾವಿ ಜಿಲ್ಲೆಯಲ್ಲಿ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಸದ್ಯ, ಕೆಲವೊಂದು ಕಡೆ ಈಗ ರಸ್ತೆ ಓಪನ್ ಆಗುತ್ತಿವೆ, ನಂತರ ಎಷ್ಟು ಹಾನಿಯಾಗಿದೆ ಎಂದು ಗೊತ್ತಾಗಲಿದೆ ಎಂದರು.
ಕಳೆದ ಬಾರಿಯ ಪರಿಹಾರ ಕೂಡಾ ನಮಗೆ ಕೈಸೇರಿಲ್ಲ. ಸರ್ಕಾರದಲ್ಲಿ ಕಚ್ಚಾಟ ಎರಡು ವರ್ಷದಿಂದ ನಡೆದಿದೆ. ಅದು ಹೊಸತಲ್ಲ, ಜಗಳ ಬೀದಿಗೆ ಬಂದಿದೆ, ಜನ ನೋಡಿದ್ದಾರೆ. ಸಿಎಂ ಉದಾಸಿ ನಿಧನ ನಂತರ ಖಾಲಿಯಾದ ಹಾನಗಲ್ ಕ್ಷೇತ್ರ ಹಾಗೂ ಸಿಂದಗಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಇನ್ನೂ ಫೈನಲ್ ಮಾಡಿಲ್ಲ. ಆ ಬಗ್ಗೆ ನಾಯಕರ ಸಮ್ಮುಖದಲ್ಲಿ ಚರ್ಚೆ ಮಾಡ್ತೇವೆ, ಚುನಾವಣೆ ಘೋಷಣೆಯಾಗಿಲ್ಲ, ಜೆಡಿಎಸ್ ಲೆಕ್ಕ ಬೇರೆ ನಮ್ಮ ಲೆಕ್ಕ ಬೇರೆ ಎಂದರು.