ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಯೋಜನೆ ಗಿಟ್ಟಿಸಿಕೊಂಡ ಸಿಟಿಯಾಗಿದೆ. ಕಳೆದ 5 ವರ್ಷಗಳಿಂದಲೂ ಸಿಟಿಯನ್ನು ಮತ್ತಷ್ಟು ಸ್ಮಾರ್ಟ್ ಮಾಡುತ್ತೇವೆ ಅಂತ ಪಣತೊಟ್ಟಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಿಟಿ ಸ್ಮಾರ್ಟ್ ಮಾಡದೇ, ಇದ್ದ ರಸ್ತೆಗಳನ್ನು ಅಗೆದ ಪರಿಣಾಮ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ.
ಹುಬ್ಬಳ್ಳಿಯಲ್ಲಿ ಉತ್ತಮವಾದ ದಾರಿ ಹುಡುಕುವ ಸ್ಥಿತಿ ಸದ್ಯ ವಾಹನ ಸವಾರರಿಗೆ ದೊಡ್ಡ ಸವಾಲಾಗಿದೆ. ನಗರದ ಪ್ರಮುಖ ರಸ್ತೆಗಳಾದ ಕೋಯಿನ್ ರೋಡ್, ಕೊಪ್ಪಿಕರ ರೋಡ್, ಸ್ಟೇಷನ್ ರೋಡ್ ಸೇರಿದಂತೆ ಹುಬ್ಬಳ್ಳಿಯ ಪ್ರಮುಖ ಮಾರ್ಕೆಟ್ ರಸ್ತೆಗಳಲ್ಲಿ ಸಂಚಾರ ಮಾಡಬೇಕು ಅಂದರೆ ಹರಸಾಹಸ ಪಡುವಂತಾಗಿದೆ. ಇನ್ನೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ತಗ್ಗುಗಳನ್ನು ವಿದ್ಯುತ್ ತಂತಿಗಾಗಿ ತೆಗೆಯಲಾಗಿದ್ದು, ಅವುಗಳನ್ನು ಹಾಗೆ ಬಿಟ್ಟಿರುವುದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿತ್ಯ ಒಂದಲ್ಲಾ ಒಂದು ರಸ್ತೆ ಅಗೆಯುವ ಕಾರ್ಯ ನಡೆಯುತ್ತಲೇ ಇದ್ದು, ವಾಣಿಜ್ಯ ನಗರಿಯ ವಾಹನ ಸವಾರರ ಗೋಳು ಹೇಳತೀರದಾಗಿದೆ. ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಸಂಚಾರ ಮಾಡುವುದೇ ದೊಡ್ಡ ಸವಾಲಾಗಿದೆ. ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ಉಚಿತ ರಸ್ತೆ ಸಂಚಾರ ಮತ್ತು ಧೂಳು ಮುಕ್ತ ಸಂಚಾರಕ್ಕೆ ಕಾರಣರಾಗಬೇಕಿದೆ.