ಹುಬ್ಬಳ್ಳಿ : ಇಷ್ಟು ದಿನ ಕೊರೊನಾ ಸೋಂಕಿತರ ಮನೆಯನ್ನು ಹಾಗೂ ಓಣಿಯನ್ನು ಸೀಲ್ ಮಾಡುತ್ತಿದ್ದ ಹು-ಧಾ ಮಹಾನಗರ ಪಾಲಿಕೆ, ಸಧ್ಯ ವಿನೂತನ ನಿರ್ಧಾರವನ್ನು ಕೈಗೊಂಡಿದ್ದು, ಹೋಮ್ ಐಸೋಲೇಷನ್ನಲ್ಲಿರುವ ಸೋಂಕಿತರ ಮನೆಗೆ ರೆಡ್ ಟೇಪ್ ಕಟ್ಟಲು ಮುಂದಾಗಿದೆ.
ಈ ಯೋಜನೆಯಿಂದ ಸೋಂಕಿತರಿರುವ ಬಗ್ಗೆ ಜನರಿಗೆ ಮಾಹಿತಿ ದೊರೆಯುತ್ತದೆ ಹಾಗೂ ಸೋಂಕಿತರು ಮನೆಯಿಂದ ಹೊರ ಬರದಂತೆ ತಡೆಯಬಹುದಾಗಿದೆ. ಅಲ್ಲದೇ ಪ್ರತ್ಯೇಕ ತ್ಯಾಜ್ಯ ಸಂಗ್ರಹಣೆಗೆ ಇದು ಸಹಕಾರಿಯಾಗಲಿದೆ. ಅಪಾಯ ದೂರ ಇರಿ (ಡೇಂಜರ್ ಕಿಪ್ ಅವೇ) ಎಂಬ ಬರಹವನ್ನು ಒಳಗೊಂಡಿರುವ ನಾಲ್ಕು ಇಂಚು ಅಗಲದ ರೆಡ್ ಟೇಪ್ ಅನ್ನು ಈಗಾಗಲೇ ಸುಮಾರು ಎರಡು ಸಾವಿರಕ್ಕೂ ಅಧಿಕ ಹೋಮ್ ಐಸೋಲೇಷನ್ ಮನೆಗಳಿಗೆ ಕಟ್ಟಲಾಗಿದೆ.
ಇನ್ನೂ ಕೊರೊನಾ ಸೋಂಕಿತರು ಹದಿನೇಳು ದಿನಗಳ ಕಾಲ ಮನೆಯಲ್ಲಿ ಆರೈಕೆಗೆ ಇರಬೇಕಾಗುತ್ತದೆ. ಗುಣಮುಖ ಸೋಂಕಿತರ ಮನೆಯ ರೆಡ್ ಟೇಪ್ ತೆಗೆದುಹಾಕಲಾಗುತ್ತದೆ. ಮನೆ ಹಾಗೂ ಏರಿಯಾವನ್ನು ಸೀಲ್ ಡೌನ್ ಮಾಡುವ ಬದಲು ಈ ನಿರ್ಧಾರವನ್ನು ಹು-ಧಾ ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.