ಧಾರವಾಡ : ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿಯ ಮಾಜಿ ಶಾಸಕ ಸಂಜಯ ಪಾಟೀಲ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಸಂಜಯ ಪಾಟೀಲ ಹೇಳಿಕೆ ಸಮರ್ಥನೀಯವಲ್ಲ. ನಾನು ಅವರಿಗೆ ವೈಯಕ್ತಿಕವಾಗಿ ತಿಳಿ ಹೇಳುವೆ ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ಬೆಳಗಾವಿಗೆ ಹೊರಟಿರುವೆ. ಅಲ್ಲಿ ಮಾತನಾಡುವೆ. ಈ ರೀತಿ ಮಾತನಾಡುವುದು ಸರಿಯಲ್ಲ. ಆ ರೀತಿ ಮಾತನಾಡಬಾರದು ಎಂದು ತಿಳುವಳಿಕೆ ಹೇಳುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದವರು ಸಹ ಬೇರೆ ಬೇರೆಯವರ ಬಗ್ಗೆ ಮಾತನಾಡಿದ್ದಾರೆ. ಆಗ ಆ ಪಕ್ಷದವರ ಪ್ರತಿಕ್ರಿಯೆ ಹೇಗಿತ್ತು. ಲಕ್ಷ್ಮಿ ಹೆಬ್ಬಾಳಕರ್ ಬಗ್ಗೆ ಮಾತನಾಡಬಾರದು. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ, ನರೇಂದ್ರ ಮೋದಿ ಬಗ್ಗೆ ಇವರು ಯಾವ ರೀತಿ ಮಾತನಾಡಿದ್ದರು. ದೇಶದ ಪ್ರಧಾನಿ ಬಗ್ಗೆಯೇ ಮಾತನಾಡಿದ್ದರು. ಆದರೆ, ಆಗ ನಾವು ಸಂಜಯ ಪಾಟೀಲರಿಗೆ ಹೇಳಿದಂತೆ ಕಾಂಗ್ರೆಸ್‌ನವರು ಹೇಳಲಿಲ್ಲ.
ಕಾಂಗ್ರೆಸ್ ಪಕ್ಷದಲ್ಲಿ ಸಂಸ್ಕೃತಿ ಇರುವ ನಾಯಕರಿಲ್ಲ. ನಮ್ಮ ಪಕ್ಷದಲ್ಲಿ ಸಂಸ್ಕೃತಿ ಇದೆ. ಹೀಗಾಗಿ, ಹೇಳುವೆ. ಲಕ್ಷ್ಮಿ ಹೆಬ್ಬಾಳಕರ್ ಜನ ಆಯ್ಕೆ ಮಾಡಿದ ಶಾಸಕಿ. ಹೀಗಾಗಿ, ಅವರ ಬಗ್ಗೆ ಹೀಗೆ ಮಾತನಾಡಬಾರದು ಎಂದು ಹೇಳಿದರು.
ಟೆರರಿಸ್ಟ್ ಸತ್ತಿದ್ದಕ್ಕೆ ಸೋನಿಯಾ ಅತ್ತಿದ್ದರು : ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ತುಷ್ಠೀಕರಣ ರಾಜಕಾರಣ ಮಾಡುತ್ತದೆ. ಹಿಂದೆ ಬಾಟ್ಲಾ ಶೂಟೌಟ್ ಪ್ರಕರಣ ಆಗಿತ್ತು. ಆಗ ಮೋಹನ ಚಂದ್ರ ಶರ್ಮಾ ಸತ್ತಿದ್ದರು. ಶರ್ಮಾ ಸತ್ತಿದ್ದಕ್ಕೆ ಅತ್ತಿರಲಿಲ್ಲ. ಆದರೆ, ಅಲ್ಲಿ ಭಯೋತ್ಪಾದಕ ಸತ್ತಿದ್ದಕ್ಕೆ ಸೋನಿಯಾ ಗಾಂಧಿ ಅತ್ತಿದ್ದರು. ಇವರ ಸಹಜ ಸ್ವಭಾವವೇ ಇದು ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ಮುಸ್ಲಿಂ ತುಷ್ಟೀಕರಣಕ್ಕಾಗಿ ಸಿದ್ದರಾಮಯ್ಯ ಈ ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯಗೆ ಆರ್‌ಎಸ್ಎಸ್ ಅಂದ್ರೆ ಏನು ಗೊತ್ತು?. ಮತ ಬ್ಯಾಂಕ್ ರಾಜಕಾರಣಕ್ಕೆ ಹೀಗೆ ಹೇಳಿಕೆ ನೀಡುತ್ತಾರೆ. ಹಿಂದೆ ರಾಮ ಜನ್ಮಭೂಮಿ ವಿರೋಧ ಮಾಡಿದ್ದರು.
ಮುಸ್ಲಿಂ ಮಹಿಳೆಯ ಜೀವನಾಂಶ ವಿಷಯಕ್ಕೂ ವಿರೋಧ ಮಾಡಿದ್ದರು. ಇದೆಲ್ಲದರಿಂದ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ. ಇವರು ಸುಧಾರಿಸಬೇಕು. ಇಲ್ಲದಿದ್ದಲ್ಲಿ ಜನ ಇನ್ನೂ ದಾರಿ ತೋರಿಸುತ್ತಾರೆ ಎಂದರು.
ದೇಶದ ಜನಕ್ಕೆ ಆರ್‌ಎಸ್ಎಸ್, ಬಿಜೆಪಿ ಏನಂತಾ ಗೊತ್ತಿದೆ. ಸಿದ್ದರಾಮಯ್ಯ ಮಾತು ಕೇಳಬೇಕಾಗಿಲ್ಲ. ಅವರೊಬ್ಬ ಗೌರವಾನ್ವಿತ ನಾಯಕ. ವೈಯಕ್ತಿಕವಾಗಿ ಅವರ ಬಗ್ಗೆ ನನಗೂ ಗೌರವ ಇದೆ. ಆದರೆ, ಮಾತನಾಡುವಾಗ ಇತಿ ಮಿತಿಯಿರಬೇಕು. ನಾವು ಕಾಂಗ್ರೆಸ್‌ನವರಿಗೆ ಐಎಸ್‌ಐ ಏಜೆಂಟ್ ಅಂದ್ರೆ ಏನು ಮಾಡ್ತಾರೆ?, ಆ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ ಮತಾಂತರ ತಡೆ ಕಾಯಿದೆ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ಮತಾಂತರ ಹಣದ ಆಸೆ, ಮೋಸ, ಒತ್ತಾಯದಿಂದ ನಡೆಯುತ್ತಿದೆ. ಮುಗ್ಧ ಜನರನ್ನು ತಪ್ಪು ದಾರಿಗೆ ಎಳೆದು ಮತಾಂತರ ಮಾಡಲಾಗುತ್ತಿದೆ. ಇದರ ಬಗ್ಗೆ ಯಾವುದೇ ಅನುಮಾನ ಇಲ್ಲ. ಹಿಂದೂಗಳನ್ನು ಬೇರೆ ಜಾತಿಗೆ ಮತಾಂತರ ಮಾಡಲಾಗುತ್ತಿದೆ. ಇದು ನಿಲ್ಲಬೇಕು. ಇದಕ್ಕೆ ಅಗತ್ಯ ಕಾನೂನು ತಿದ್ದುಪಡಿಯನ್ನ ರಾಜ್ಯ ಸರ್ಕಾರ ಮಾಡಬೇಕು. ಇದನ್ನು ತಡೆಯಲು ಸರ್ವ ರೀತಿಯ ಪ್ರಯತ್ನ ಆಗಬೇಕು ಎಂದರು.
ಇದನ್ನೂ ಓದಿ: ಶಾಸಕಿ ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ