ಧಾರವಾಡ: ಬಲಿಷ್ಠ ಭಾರತ ಕಟ್ಟುವಲ್ಲಿ ಯುವ ಸಮುದಾಯದ ಪಾತ್ರ ಬಹುಮುಖ್ಯ. ಅವರ ಮಾನಸಿಕ ಹಾಗೂ ದೈಹಿಕ ಸದೃಢತೆಯನ್ನು ದೇಶದ ಅಭಿವೃದ್ಧಿ ಅವಲಂಬಿಸಿದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಆರೋಗ್ಯ ಹಾಗೂ ಬೆಳವಣಿಗೆ ಕಲ್ಪಿಸಲು ಪಾಲಕರು ತಪ್ಪದೆ ಜಂತು ನಿವಾರಕ ಮಾತ್ರೆ ನೀಡಬೇಕು. ಇದರಿಂದ ಸರಿಯಾದ ಪಚನವಾಗಿ ದೇಹಕ್ಕೆ ಪೌಷ್ಠಿಕಾಂಶ ದೊರಕುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ರಾಷ್ಟ್ರೀಯ ಜಂತುಹುಳು ನಿವಾರಣೆ ದಿನಾಚರಣೆ ಕಾರ್ಯಕ್ರಮ ಕೆ.ಇ. ಬೋರ್ಡ್ ಸಂಸ್ಥೆಯ ಕರ್ನಾಟಕ ಹೈಸ್ಕೂಲ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬರಿಗಾಲಿನ ನಡಿಗೆ, ಮಣ್ಣಿನಲ್ಲಿ ಆಟ, ಅಸುರಕ್ಷಿತವಾಗಿ ಆಹಾರ ಸೇವನೆ, ನೀರು ಕುಡಿಯುವುದು, ಅನೈರ್ಮಲ್ಯತೆ ಇತ್ಯಾದಿಗಳಿಂದ ಮಕ್ಕಳಲ್ಲಿ ಜಂತುಹುಳು ಉತ್ಪಾದನೆ ಆಗುತ್ತದೆ. ಇದರಿಂದಾಗಿ ಮಕ್ಕಳು ಸೇವಿಸಿದ ಆಹಾರ ಸರಿಯಾಗಿ ಪಚನವಾಗದೆ ಬೆಳವಣಿಗೆ ಕುಂಠಿತವಾಗುತ್ತದೆ. ಮಕ್ಕಳಲ್ಲಿ ಅಶಕ್ತತೆ, ಕುಬ್ಜತೆ, ಬಡಕಲು ದೇಹ ಹೊಂದುವುದು ಉಂಟಾಗುತ್ತದೆ. ಜಂತುಹುಳು ನಿವಾರಕ ಮಾತ್ರೆ ತಿನ್ನಿಸುವುದರಿಂದ ಈ ಸಮಸ್ಯೆ ಪರಿಹರಿಸಿ, ಸಮಪ್ರಮಾಣದಲ್ಲಿ ಮಕ್ಕಳು ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಹೊಂದಬಹುದು ಎಂದು ಅವರು ಹೇಳಿದರು.ಜಿಲ್ಲಾ ಪಂಚಾಯತ್ ಸಿಇಒ ಡಾ.ಬಿ.ಸಿ.ಸತೀಶ್ ಹಾಗೂ ಕೆ.ಇ.ಬೋರ್ಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಅರುಣ ನಾಡಗೀರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಳಗಾವಿ ವಿಭಾಗದ ಸಹ ನಿರ್ದೇಶಕ ಡಾ.ಅಪ್ಪಾಸಾಹೇಬ್ ನರಹಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಯಶವಂತ ಮದೀನಕರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್‍ಕುಮಾರ್ ಹಂಚಾಟೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.