ಹುಬ್ಬಳ್ಳಿ-ಧಾರವಾಡ:: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NWKRTC)ಯಿಂದ ಪ್ರಯಾಣಿಕರ ಬೇಡಿಕೆ ಹಾಗೂ ಆದ್ಯತೆಯ ಮೇರೆಗೆ ಬಸ್ ಸಂಚಾರ ಆರಂಭಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಬಸ್ಸುಗಳು ಕಾರ್ಯಾಚರಣೆ ಮಾಡಿದ್ದು, ಮೈಸೂರು ಜಿಲ್ಲೆ ಹೊರತುಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಸ್ಸುಗಳು ಸಂಚಾರ ಆರಂಭಿಸಿವೆ.
ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಕೋವಿಡ್ ಲಸಿಕೆ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಶೇ.92 ರಷ್ಟು ಸಿಬ್ಬಂದಿಗೆ ಲಸಿಕೆ ಪೂರ್ಣ ಮಾಡಲಾಗಿದೆ. ಪ್ರಯಾಣಿಕರ ಬೇಡಿಕೆಗನುಗುಣವಾಗಿ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು. ಪ್ರಯಾಣಿಕರು ಕುಳಿತುಕೊಳ್ಳುವ ಮೂರು ಆಸನಗಳಲ್ಲಿ ಇಬ್ಬರಿಗೆ ಹಾಗೂ ಎರಡು ಆಸನದಲ್ಲಿ ಒಬ್ಬರಿಗೆ ಮಾತ್ರ ಕುಳಿತುಕೊಳ್ಳುವ ಏರ್ಪಾಡು ಮಾಡಲಾಗಿದೆ.
ಇನ್ನು ಚಾಲನಾ ಸಿಬ್ಬಂದಿ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ. ಅಂತಹ ಸಿಬ್ಬಂದಿಗೆ ಮಾತ್ರ ಕರ್ತವ್ಯಕ್ಕೆ ಅವಕಾಶ ನೀಡಲಾಗಿದೆ. ಅಂತರ್ ಜಿಲ್ಲಾ ಬಸ್ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸದ್ಯ ಸುಮಾರು 200 ಬಸ್‌ಗಳು ರಸ್ತೆಗಿಳಿಯಲಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಸಾರವಾಗಿ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಧಾರವಾಡದಲ್ಲೂ ಬಸ್ ಸಂಚಾರ:
ಧಾರವಾಡದಲ್ಲೂ ಬಸ್ ಸಂಚಾರ, ಖಾಸಗಿ ವಾಹನ ಸಂಚಾರ ಹಾಗೂ ಹೋಟೆಲ್ಗಳು ಪುನಾರಂಭಗೊಂಡಿವೆ. ಕೊರೊನಾ ಮಾರ್ಗಸೂಚಿಗಳ ಅನ್ವಯ ಹೋಟೆಲ್ ಓಪನ್ ಮಾಡಲಾಗಿದೆ. ಆದರೆ ಬಸ್ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ.
ಇದನ್ನೂ ಓದಿ: ಕಲಬುರಗಿ: ಬಸ್ಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಂಚಾರಕ್ಕೆ ಚಾಲನೆ