ಹುಬ್ಬಳ್ಳಿ: ಲಾಕ್ಡೌನ್ ನಡುವೆಯೂ ಬೇಕಾಬಿಟ್ಟಿ ಮನೆಯಿಂದ ಹೊರಬಂದು ತಿರುಗುವ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಹಾಗೂ ಸ್ವಯಂ ಸೇವಕರು ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಹಾಡುಗಳ ಮೂಲಕ, ಬೀದಿ ನಾಟಕಗಳ ಮೂಲಕ ಹಾಗೂ ಮನೆ ಮನೆಗೆ ತೆರಳಿ ಜನರಲ್ಲಿ ತಿಳವಳಿಗೆ ಮೂಡಿಸಲು ಯತ್ನಿಸುತ್ತಿದ್ದಾರೆ.
ಇದೀಗ ಹುಬ್ಬಳ್ಳಿಯಲ್ಲಿ 'ನೋ ಮಾಸ್ಕ್ ನೋ ಫ್ಯೂಯಲ್' ಅಭಿಯಾನ ಆರಂಭವಾಗಿದೆ. ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್‌ಗಳಿಗೆ ಗ್ರಾಹಕರು ಮಾಸ್ಕ್ ಧರಿಸದೆ ಹೋದರೆ ಅಂತವರಿಗೆ ಪೆಟ್ರೋಲ್, ಡೀಸೆಲ್ ಸಿಗುವುದಿಲ್ಲ. ಪೆಟ್ರೋಲ್ ಬಂಕ್‌ಗಳಲ್ಲಿ ದುಡಿಯುವ ಕಾರ್ಮಿಕರು ಮಾಸ್ಕ್, ಸ್ಯಾನಿಟೈಸರ್ ಬಳಸುತ್ತಿದ್ದು ಗ್ರಾಹಕರು ಕೂಡಾ ತಮ್ಮ, ಹಾಗೂ ಇತರರ ಸುರಕ್ಷತೆ ದೃಷ್ಟಿಯಿಂದ ಮಾಸ್ಕ್ ಧರಿಸಬೇಕೆನ್ನುವುದು ಪೆಟ್ರೋಲ್ ಬಂಕ್ ಮಾಲೀಕರ ಕಳಕಳಿಯಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪೆಟ್ರೋಲ್ ಬಂಕ್‌ಗಳಲ್ಲಿ ’ನೋ ಮಾಸ್ಕ್ ನೋ ಫ್ಯೂಯೆಲ್’ ಎಂಬ ಅಭಿಯಾನ ಆರಂಭಿಸಲಾಗಿದೆ. ಪೆಟ್ರೋಲ್ ಬಂಕ್ ಬಳಿ 'ಮಾಸ್ಕ್ ಧರಿಸಿದವರಿಗೆ ಮಾತ್ರ ಇಂಧನ ಹಾಕಲಾಗುವುದು' ಎಂಬ ಬೋರ್ಡ್ ಕೂಡಾ ಹಾಕಲಾಗಿದೆ. ಈ ಕಾರಣದಿಂದ ಬಹುತೇಕರು ಮಾಸ್ಕ್ ಧರಿಸಿ ಬರುತ್ತಿದ್ದಾರೆ. ಆದರೆ ಮಾಸ್ಕ್ ಧರಿಸದೆ ಬರುವವರು ಪೆಟ್ರೋಲ್ ಸಿಗದೆ ವಾಪಸ್ ಹೋಗುತ್ತಿದ್ದಾರೆ. ಇದಕ್ಕೂ ಮುನ್ನ 'ನೋ ಹೆಲ್ಮೆಟ್ ನೋ ಪೆಟ್ರೋಲ್ 'ಎಂಬ ಅಭಿಯಾನ ಜಿಲ್ಲೆಯಲ್ಲಿ ಯಶಸ್ವಿಯಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಮಾಸ್ಕ್ ಜಾಗೃತಿ ಮೂಡಿಸುತ್ತಿರುವುದು ವಿಶೇಷ.