ಹುಬ್ಬಳ್ಳಿ : ಕೇಂದ್ರ ಸರ್ಕಾರದ ಸೂಕ್ತ ಬೆಂಬಲದಿಂದ ಇನ್ವೆಸ್ಟ್ ಕರ್ನಾಟಕ ಸಮಾವೇಶ ಯಶಸ್ವಿಯಾಗಲು ಸಾಧ್ಯವಾಯಿತು. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತದಲ್ಲಿದ್ದಾಗ ಮಾತ್ರ ಹೆಚ್ಚಿನ ಅಭಿವೃದ್ಧಿ ಕಾಣಬಹುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಒಂದು ಸರ್ಕಾರ ಹಾಗೂ ರಾಜ್ಯದಲ್ಲಿ ಇನ್ನೊಂದು ಸರ್ಕಾರ ಇದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಆದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇರುವುದರಿಂದ ಶೀಘ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಸಮಾವೇಶದಲ್ಲಿ ಭಾಗವಹಿಸಿದ ಉದ್ಯಮಿಗಳು ಸ್ವಯಂಪ್ರೇರಿತರಾಗಿ ಸುಮಾರು 70 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆಗೆ ಮುಂದಾಗಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಹಗಲಿರುಳು ಶ್ರಮವಹಿಸಿ ದುಡಿದಿದ್ದಾರೆ. ಅಲ್ಲದೇ ಪ್ರಹ್ಲಾದ್ ಜೋಶಿಯವರ ಬೆಂಬಲದಿಂದ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ 1,500 ಕ್ಕೂ ಹೆಚ್ಚು ಕೈಗಾರಿಕೋದ್ಯಮ ಪ್ರತಿನಿಧಿಗಳು ಭಾಗವಹಿಸಿದ್ದು, 50 ಕ್ಕೂ ಹೆಚ್ಚು ಕಂಪನಿಗಳು ತಮ್ಮ ಒಡಂಬಡಿಕೆಯನ್ನು ಸಲ್ಲಿಸಿವೆ ಎಂದರು. ಈಗಾಗಲೇ ಒಡಂಬಡಿಕೆಯನ್ನು ಸಲ್ಲಿಸಿರುವ ಕೈಗಾರಿಕೆಗಳ ಫಾಲೋ ಆಫ್ ಮಾಡುವ ಮೂಲಕ ಕೈಗಾರಿಕಾ ಸ್ಥಾಪನೆಗೆ ಶ್ರಮಿಸಲಾಗುವುದು. ಬಂದಿರುವ ಒಡಂಬಡಿಕೆಯಲ್ಲಿ ರಾಜೇಶ್ ಎಕ್ಸ್‌ಪೋರ್ಟ್ಸ್ ಬಂಡವಾಳ ಹೂಡಿಕೆ ಹೆಚ್ಚಾಗಿದೆ ಎಂದ ಅವರು, ರಾಜೇಶ್ ಮೆಹ್ತಾ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಡಿಸಿಎಂ ಲಕ್ಷ್ಮಣ ಸವದಿ, ಗೌರವ ಗುಪ್ತ, ಜಿಲ್ಲಾಧಿಕಾರಿ ದೀಪಾ ಚೋಳನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.