ಹುಬ್ಬಳ್ಳಿ: ಸಚಿವ ಸಂಪುಟ ಪುನರ್‌ರಚನೆ ಮತ್ತು ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟದ್ದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಸಿಎಂ ದೆಹಲಿಗೆ ತೆರಳಿ ವರಿಷ್ಠರ ಜೊತೆ ಚರ್ಚಿಸಲಿದ್ದಾರೆ. ಬಹಳಷ್ಟು ಸರ್ಕಸ್ ಮಾಡಿ ಸರ್ಕಾರ ನಡೆಸುತ್ತಿದ್ದೇವೆ. ಹೊಸಬರು ಬಂದಿದ್ದು, ಅವರಿಗೆ ಆದ್ಯತೆ ಕೊಡಬೇಕಾಗುತ್ತೆ. ಹಳಬರಲ್ಲಿ ಸೀನಿಯರ್‌ಗಳಿಗೆ ಆದ್ಯತೆ ಕೊಡಬೇಕಾಗುತ್ತೆ. ವರಿಷ್ಠರಾಗಲಿ, ಸಿಎಂ ಆಗಲಿ ನನ್ನ ಅಭಿಪ್ರಾಯ ಕೇಳಿಲ್ಲ. ಹೀಗಾಗಿ ಸಚಿವ ಸಂಪುಟದ ಬಗ್ಗೆ ಏನೂ ಹೇಳುವ ಪರಿಸ್ಥಿತಿಯಲ್ಲಿ ನಾನಿಲ್ಲ ಎಂದು ಹೇಳಿದರು.
ಶಾಲೆ ಆರಂಭದ ಬಗ್ಗೆ ಪಾಲಕರಲ್ಲಿ ಇನ್ನೂ ಭಯ ಇದೆ:
ಅನ್ಲಾಕ್ ಬಳಿಕ ಶಾಲೆಗಳ ಆರಂಭದ ಬಗ್ಗೆ ಪಾಲಕರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಪೋಷಕರಿಗೆ ನಮ್ಮ ಮಕ್ಕಳು ಸುರಕ್ಷಿತ ಎಂಬ ಭಾವನೆ ಬರುವ ತನಕ ಶಾಲೆಗಳನ್ನು ಆರಂಭಿಸೋದು ಬೇಡ. ಶಾಲೆ ತೆರೆಯುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡವಿದೆ. ಬೇಕಿದ್ದರೆ ಕೆಲವು ಶಾಲೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಿ. ಸಾಧಕ ಬಾಧಕ ನೋಡಿಕೊಂಡ ನಂತರ ಶಾಲೆಗಳನ್ನು ಪ್ರಾರಂಭಿಸಬಹುದು ಎಂದರು.
ಪಾಲಕರಲ್ಲಿ ಸದ್ಯಕ್ಕೆ ಭಯದ ವಾತಾವರಣವಿದೆ. ತಕ್ಷಣವೇ ಎಲ್ಲಾ ಶಾಲೆಗಳನ್ನು ಪ್ರಾರಂಭಿಸುವುದರಿಂದ ಸಮಸ್ಯೆಗಳು ಎದುರಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಗಳ ಆರಂಭದ ಕುರಿತು ಶಿಕ್ಷಣ ಸಚಿವರು ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ಶಿಕ್ಷಣ ಸಚಿವರು ಬರೆದಿರುವ ಪತ್ರ ನನಗೆ ಬಂದಿಲ್ಲ. ಈ ಕುರಿತು ನಾನು ಏನನ್ನೂ ಹೇಳುವುದಿಲ್ಲ. ಇಷ್ಟು ದಿನ ನಾವು ಅಧಿವೇಶನದಲ್ಲಿ ಇದ್ವಿ. ಅಲ್ಲಿಯೇ ಚರ್ಚಿಸಬಹುದಿತ್ತು. ಪತ್ರ ಬರೆದರೆ ಏನ್ ಹೇಳೋದು ಎಂದು ಪ್ರಶ್ನಿಸಿದರು.