ಧಾರವಾಡ: ಗಿರೀಶ್ ಕಾರ್ನಾಡ್ ಎಂದಾಕ್ಷಣ ನೆನಪಾಗುವುದು ಯಯಾತಿ ಮತ್ತು ತುಘಲಕ್ ನಾಟಕಗಳು. ಇಂತಹ ಖ್ಯಾತ ನಾಟಕಗಳನ್ನು ಕಾರ್ನಾಡರು ಹೇಗೆ ಬರೆದಿದ್ದರು ಎಂಬುವುದು ಎಲ್ಲಿಯೂ ನೋಡಲು ಸಿಗುವುದಿಲ್ಲ, ಖುದ್ದು ಕಾರ್ನಾಡರ ಮನೆಯಲ್ಲಿ ಸಹ ಸಿಗುವುದಿಲ್ಲ. ಆದರೆ ಆ ಹಸ್ತಪ್ರತಿಗಳ ಜೊತೆ ಜೊತೆಗೆ ಕಾರ್ನಾಡರಿಗೆ ಬಂದಿರುವ ಚಲನಚಿತ್ರ ಪ್ರಶಸ್ತಿಗಳೆಲ್ಲ ಧಾರವಾಡದಲ್ಲಿ ಕಾಣ ಸಿಗುತ್ತವೆ.
ಹೌದು, ಧಾರವಾಡ ಮಹಾನಗರ ಪಾಲಿಕೆಯ ಆವರಣದಲ್ಲಿರುವ ಇನ್ಟ್ಯಾಂಕ್ ಪಾರಂಪರಿಕ ವಸ್ತು ಸಂಗ್ರಹಾಲಯದಲ್ಲಿ ಕಾರ್ನಾಡರ ಅಮೂಲ್ಯ ವಸ್ತುಗಳನ್ನು ಜೋಪಾನವಾಗಿ ಕಾದುಕೊಂಡು ಬರಲಾಗುತ್ತಿದೆ. ಯಯಾತಿ ನಾಟಕವನ್ನು ಕಾರ್ನಾಡ್ ಹೇಗೆ ಬರೆದಿದ್ದರು, ಎಲ್ಲೆಲ್ಲಿ ಏನೇನು ಗೀಚು ಹಾಕಿದ್ದರು, ತುಘಲಕ್ ನಾಟಕದಲ್ಲಿ ಬರೆದ ಅಕ್ಷರಗಳನ್ನು ಹೇಗೆಲ್ಲ ಬದಲಿಸಿದ್ದರು ಅನ್ನೋದೆಲ್ಲರದ ಮೂಲ ಪ್ರತಿ ಇಲ್ಲಿಯೇ ಸಿಗುತ್ತೆ.
ಕೆಲ ವರ್ಷಗಳ ಹಿಂದೆ ಕಾರ್ನಾಡರು ಧಾರವಾಡದ ಸಾರಸ್ವತಪುರದಲ್ಲಿರುವ ತಮ್ಮ ಮನೆಯನ್ನು ದೆಹಲಿ ಮೂಲದ ಮಧು ಎನ್ನುವವರಿಗೆ ಮಾರಿದ್ದಾರೆ. ಈ ಸಂದರ್ಭದಲ್ಲಿ ಈ ಮನೆಯಲ್ಲಿದ್ದ ಎಲ್ಲ ಅಮೂಲ್ಯ ವಸ್ತುಗಳನ್ನು ತಮಗೆ ನೀಡುವಂತೆ ಈ ಮ್ಯೂಸಿಯಂನ ಅಧ್ಯಕ್ಷರಾದ ಎನ್.ಪಿ. ಭಟ್ ಅವರು ದೂರವಾಣಿಯಲ್ಲಿ ಕೇಳಿದ್ದಾಗ, ಕಾರ್ನಾಡರು ಒಪ್ಪಿಗೆ ಸೂಚಿಸಿದ್ದರು. ಅದರನ್ವಯ ಕಾರ್ನಾಡರು ಬರೆದ ಯಯಾತಿ, ತುಘಲಕ್ ನಾಟಕದ ಹಸ್ತಪ್ರತಿಗಳು, ಇವರಿಗೆ ಸಿಕ್ಕ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು, ಪ್ರಶಸ್ತಿ ಪತ್ರಗಳೆಲ್ಲವನ್ನೂ ಇಲ್ಲಿ ಇಡಲಾಗಿದ್ದು, ನಿತ್ಯವೂ ಜನ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.