ಹುಬ್ಬಳ್ಳಿ: ನಗರದ ಕಿಮ್ಸ್ ಆವರಣದಲ್ಲಿ ಕೇವಲ 14 ದಿನಗಳಲ್ಲಿ 66 ಬೆಡ್ಗಳ ಕೋವಿಡ್ ವಿನೂತನ ಮೇಕ್ ಶಿಫ್ಟ್ ಮಾದರಿಯಲ್ಲಿ ಆಸ್ಪತ್ರೆಯನ್ನು ಜಿಲ್ಲಾಡಳಿತ ತೆರೆದಿದೆ. ಇದನ್ನು ಮೇ 14ರಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟನೆ ಮಾಡಿದ್ದರು. ಆದ್ರೆ ಉದ್ಘಾಟನೆಯಾಗಿ ಐದು ದಿನ ಕಳೆಯುತ್ತಾ ಬಂದರೂ ಆಸ್ಪತ್ರೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಇದು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಿದ್ಧಪಡಿಸಿರುವ ವಿನೂತನ ಮೇಕ್ ಶಿಪ್ಟ್ ಆಸ್ಪತ್ರೆ. ಈ ಆಸ್ಪತ್ರೆ ರಾಜ್ಯದಲ್ಲಿ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ರೆ ಸರಿಯಾಗಿ ಕಾಮಗಾರಿ ಮುಗಿಯದ ಆಸ್ಪತ್ರೆಯನ್ನು ತುರಾತುರಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ನಿಧಿಯ 66 ಲಕ್ಷ ರೂ. ವೆಚ್ಚದಲ್ಲಿ 1500 ಚದರ ಮೀಟರ್ ವಿಸ್ತೀರ್ಣದ ಮೂರು ಕ್ಯಾಜುಯಾಲಿಟಿ ಕೇಂದ್ರಗಳನ್ನು ನಿರ್ಮಿಸಲಾಗಿತ್ತು. ವಿದ್ಯುತ್ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಪ್ರತಿ ಕೇಂದ್ರ 22 ಹಾಸಿಗೆಗಳ ಸಾಮಾರ್ಥ್ಯ ಹೊಂದಿದೆ. ಕ್ಯಾಜ್ಯುಯಾಲಿಟಿ ಕೇಂದ್ರದ ಮಧ್ಯದಲ್ಲಿ ವೈದ್ಯರು ಹಾಗೂ ನರ್ಸ್‌ಗಳು ಕಾರ್ಯನಿರ್ವಹಿಸಲು ಪ್ರತ್ಯೇಕ ಸ್ಥಳಾವಕಾಶವಿದೆ. 250 ಚದರ ಮೀಟರ್ ವಿಸ್ತೀರ್ಣದಲ್ಲಿ ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕವಾಗಿ 6 ಬಾತ್ ರೂಮ್ ಹಾಗೂ 6 ಸುಸಜ್ಜಿತ ಶೌಚಾಲಯಗಳನ್ನ ನಿರ್ಮಿಸಲಾಗಿದೆ. 20 ವರ್ಷಗಳ ಕಾಲ ಬಾಳಿಕೆ ಬರಲಿದೆ. ಅಗತ್ಯವಿದ್ದೆಡೆ ಆಸ್ಪತ್ರೆಯನ್ನು ಸ್ಥಳಾಂತರಿಸಬಹುದಾಗಿದೆ.
ಇದನ್ನು ಕೇವಲ 14 ದಿನದಲ್ಲಿ ನಿರ್ಮಿಸಲಾಗಿದೆ ಎಂದು ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದರು. ಆದ್ರೆ ಇನ್ನೂ ಅರ್ಧದಷ್ಟು ಕಾಮಗಾರಿ ಇದೆ. ಇಷ್ಟಿದ್ದರೂ ತರಾತುರಿಯಲ್ಲಿ ಆಸ್ಪತ್ರೆ ಉದ್ಘಾಟನೆ ಮಾಡಿದ್ದರು. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಕೇಳಿದ್ರೆ, ಆಸ್ಪತ್ರೆ ಆರಂಭವಾಗದ ಬಗ್ಗೆ ಮಾಹಿತಿ ಪಡೆಯುತ್ತೇನೆ ಎನ್ನುತ್ತಿದ್ದಾರೆ. ಇನ್ನು ಅರ್ಧದಷ್ಟು ಕಾಮಗಾರಿ ಬಾಕಿ ಇದೆ. ಆದ್ರೆ ಜಿಲ್ಲಾಡಳಿತ ಮಾತ್ರ ಸಚಿವರಿಂದ ಆಸ್ಪತ್ರೆ ಉದ್ಘಾಟನೆ ಮಾಡಿಸಿದೆ. ಆದ್ರೆ ಈಗ ಆಸ್ಪತ್ರೆ ಪ್ರಾರಂಭವಾಗದಿರುವುದು ಸಚಿವರಿಗೆ ಮುಜುಗರುವನ್ನುಂಟು ಮಾಡಿದೆ.