ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಟ್ರಾಫಿಕ್ ಕಿರಿಕಿರಿಯಿಂದ ವಾಹನ ಸವಾರರು ಹೈರಾಣಾಗಿದ್ದು, ಮಂದಗತಿಯಲ್ಲಿ ಸಾಗಿದ ಫ್ಲೈ ಓವರ್ ಕಾಮಗಾರಿ ವೇಗ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟಕದ ಬಹುದೊಡ್ಡ ವ್ಯಾಪಾರ ಕೇಂದ್ರವಾಗಿರುವ ಹುಬ್ಬಳ್ಳಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಟ್ರಾಫಿಕ್ ಕಿರಿಕಿರಿಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಟ್ರಾಫಿಕ್ ಕಿರಿಕಿರಿ ತಪ್ಪಿಸಿ ವಾಹನ ದಟ್ಟಣೆ ಕಡಿಮೆ ಮಾಡಲು ಫ್ಲೈ ಓವರ್ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ ಫ್ಲೈ ಓವರ್ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಜನರು ಹಿಡಿಶಾಪ ಹಾಕುವಂತಾಗಿದೆ.
ಹುಬ್ಬಳ್ಳಿ ನಗರದಲ್ಲಿ ಚೆನ್ನಮ್ಮ ವೃತ್ತದ ಮೂಲಕ ಹಾದು ಹೋಗುವ ಫ್ಲೈ ಓವರ್ 3.6 ಕಿ. ಮೀ ಉದ್ದವಿದೆ. ಚೆನ್ನಮ್ಮ ವೃತ್ತದಿಂದ ಬಾಗಲಕೋಟೆ ರಸ್ತೆಯಲ್ಲಿ ದೇಸಾಯಿ ವೃತ್ತದವರೆಗೆ, ಧಾರವಾಡ ರಸ್ತೆಯಲ್ಲಿ ಹೊಸೂರುವರೆಗೆ, ಗದಗ ರಸ್ತೆಯಲ್ಲಿ ಅಂಬೇಡ್ಕರ್ ವೃತ್ತದವರೆಗೆ ಒಟ್ಟು 3.6 ಕಿ.ಮೀ. ನಾಲ್ಕು ಪಥದ ಫ್ಲೈ ಓವರ್ ನಿರ್ಮಾಣವಾಗಲಿದೆ.
ಮೂರು ಹಂತದ ಯೋಜನೆಗೆ 1,242 ಕೋಟಿ ರೂ. ವೆಚ್ಚದ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಯೋಜನೆ ವೆಚ್ಚ ಹೆಚ್ಚಾಗಿದೆ ಎಂಬ ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಮೂರು ಹಂತಗಳಾಗಿ ವಿಂಗಡಿಸಿ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಆದ್ರೆ ಕಾಮಗಾರಿ ಆರಂಭಕ್ಕೆ ಮುನ್ನ ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಬೇಕಿತ್ತು. ಹುಬ್ಬಳ್ಳಿಯ ಬಹುತೇಕ ರಸ್ತೆಗಳು ತಗ್ಗು ಗುಂಡಿಗಳಿಂದ ತುಂಬಿದ್ದು, ಬದಲಿ ಮಾರ್ಗದ ವ್ಯವಸ್ಥೆ ಮಾಡದೆ ಕಾಮಗಾರಿ ಆರಂಭಿಸಿರುವುದು ಜನರ ಜೀವ ಹಿಂಡುವಂತಾಗಿದೆ. ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮತ್ತೊಮ್ಮೆ ಚರ್ಚಿಸುವುದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.