ಹುಬ್ಬಳ್ಳಿ: ಪಿತ್ತಜನಕಾಂಗದ ಜೀವಂತ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೋಗಿಗೆ ಅಪೋಲೋ ಆಸ್ಪತ್ರೆಯ ವೈದ್ಯರು ಮರು ಜನ್ಮ ನೀಡಿದ್ದಾರೆ. ಈ ಮೂಲಕ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯ ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.
ಶಸ್ತ್ರಚಿಕಿತ್ಸೆಗೊಳಗಾದ ಉಮಾ ಮತ್ತು ಅಶೋಕ ದಂಪತಿ, ವೈದ್ಯ ಸಂಜಯ್ ಗೋವಿಲ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಈ ವೇಳೆ ಸಂಜಯ್ ಗೋವಿಲ್ ಮಾತನಾಡಿ, ರೈಲ್ವೆ ವಲಯದಲ್ಲಿ ಕೆಲಸ ಮಾಡುತ್ತಿರುವ ನೌಕರ ಅಶೋಕ್ ಕುಮಾರ್ಗೆ (53) 2015ರಲ್ಲಿ ಕಾಮಾಲೆ ರೋಗಕ್ಕೆ ತುತ್ತಾಗಿದ್ದರು. ಈ ವೇಳೆ ಪರೀಕ್ಷೆಗೊಳಪಡಿಸಿದಾಗ ಅವರಿಗೆ ಯಕೃತ್ನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು ಎಂದರು.
ಹೀಗಾಗಿ, 2016ರಲ್ಲೇ ಯಶಸ್ವಿಯಾಗಿ ಯಕೃತ್ ಕಸಿ ಮಾಡಲಾಯಿತು. ಅಂದು ಅಂಗಾಗ ಕಸಿ ಮಾಡಿದ ಬಳಿಕ ಏನಾಗುತ್ತದೋ ಎಂಬ ಆತಂಕ ನಮ್ಮಲ್ಲಿತ್ತು. ಚಿಕಿತ್ಸೆ ಪಡೆದು 4 ವರ್ಷಗಳಾಗಿದೆ. ಈಗವರು ಆರೋಗ್ಯದಿಂದಿದ್ದು, ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ವೈದ್ಯ ದಂಪತಿ ಸಂತಸ ವ್ಯಕ್ತಪಡಿಸಿದರು.
ಅಶೋಕ್ ಕುಮಾರ್ ಮಾತನಾಡಿ, ಚಿಕಿತ್ಸೆ ಪಡೆದು ಆಸ್ಪತ್ರೆಯಲ್ಲೇ ಮೂರು ವಾರಗಳಿದ್ದೆ. ಈ ಸಂದರ್ಭದಲ್ಲಿ ಸರಳ ವ್ಯಾಯಾಮ ಮಾಡುತ್ತಿದ್ದೆ. ವೈದ್ಯರ ಸಲಹೆ ಮೇರೆಗೆ ಕಡ್ಡಾಯವಾಗಿ ಔಷಧಗಳನ್ನು ಸೇವಿಸುತ್ತಿದ್ದೆ. ಪ್ರಸ್ತುತ ಎಲ್ಲರಂತೆ ಆರೋಗ್ಯಕರ ಜೀವನ ನಡೆಸುತ್ತಿದ್ದೇನೆ. ನನಗೆ ಪುನರ್ಜನ್ಮ ನೀಡಿದ ವೈದ್ಯರಿಗೆ ಧನ್ಯವಾದ ಎಂದರು.