ಧಾರವಾಡ: ಎಸ್‌ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಾಲೇಜಿನ ಸುತ್ತಮುತ್ತಲಿನ ಶಾಲಾ - ಕಾಲೇಜು, ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
Dharwad SDM Medical College: ನಿನ್ನೆ 66 ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಮಧ್ಯರಾತ್ರಿವರೆಗೆ 700 ಜನರ ತಪಾಸಣೆ ಮಾಡಿದ್ದೆವು. ಅದರಲ್ಲಿ 166 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಈಗ ಸೋಂಕಿತರ ಸಂಖ್ಯೆ 182 ಆಗಿದೆ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.
ಎಲ್ಲ ಸಿಬ್ಬಂದಿಗೆ ತಪಾಸಣೆ ಮಾಡಲಾಗುವುದು. ಸುಮಾರು 3,500 ಮಂದಿಯ ಟೆಸ್ಟ್ ಮಾಡಲಿದ್ದು, ಎಲ್ಲರ ರಿಸಲ್ಟ್ ಬರಬೇಕಿದೆ. ಅಲ್ಲಿಯವರೆಗೆ ಜನರ ಭೇಟಿ ನಿರ್ಬಂಧಿಸಲು ಸೂಚಿಸಿದ್ದೇವೆ. ರೋಗಿಗಳ ಅಂಟೆಂಡರ್‌ಗಳಿಗೂ ನಿಯಂತ್ರಣ ಹಾಕಲು ಹೇಳಿದ್ದೇವೆ. ಎಮರ್ಜನ್ಸಿ ಕೇಸ್ ಮಾತ್ರ ತೆಗೆದುಕೊಳ್ಳಲು ಹೇಳಿದ್ದೇವೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಕಾಲೇಜು ಸುತ್ತಮುತ್ತಲಿನ ಶಾಲಾ - ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಿದ್ದೇವೆ. ಇದು 500 ಮೀಟರ್ ವ್ಯಾಪ್ತಿಯ ಶಾಲೆಗಳಿಗೆ ಅನ್ವಯಿಸುತ್ತದೆ. ಈಗಾಗಲೇ 1,500 ಜನರ ಟೆಸ್ಟ್ ಆಗಿದೆ. ಇನ್ನೂ 2,500 ಜನರ ಟೆಸ್ಟ್ ಇವತ್ತು ಮುಗಿಸುತ್ತೇವೆ. ನಾಳೆಯೊಳಗೆ ಎಲ್ಲರ ರಿಸಲ್ಟ್ ಬರಲಿದೆ. ಡಿಮ್ಹಾನ್ಸ್, ಕಿಮ್ಸ್, ಎಸ್‌ಡಿಎಂ ಲ್ಯಾಬ್ ಟೆಸ್ಟ್ ನಡೆಸಲು ಬಳಸುತ್ತಿದ್ದೇವೆ ಎಂದರು.
ಮದುವೆಯಲ್ಲಿ ಭಾಗಿಯಾಗಿದ್ದ 182 ವಿದ್ಯಾರ್ಥಿಗಳಿಗೆ ಸೋಂಕು:
ಮೆಡಿಕಲ್ ಕಾಲೇಜ್ ಕೊರೊನಾ ಸ್ಫೋಟದ ಹಿನ್ನೆಲೆಯಲ್ಲಿ ಮದುವೆಗೂ ಕಂಟಕ ಎದುರಾಗಿದೆ. ಮೆಡಿಕಲ್ ಕಾಲೇಜ್‌ನ 182 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲ ಒಂದೇ ಸಮಾರಂಭದಲ್ಲಿ ಭಾಗಿಯಾದವರು ಎಂದು ಡಿಸಿ ಮಾಹಿತಿ ನೀಡಿದ್ದಾರೆ.
ನ. 17ರಂದು ನಡೆದಿದ್ದ ಸಮಾರಂಭ ಬಳಿಕ ಅದೇ ಸಭಾಭವನದಲ್ಲಿ ಮದುವೆಯೊಂದು ನಡೆದಿದೆ. ನ.19ರಂದು ಅದ್ದೂರಿ ಮದುವೆ ನಡೆದಿತ್ತು. ಸದ್ಯ ಮದುವೆಗೆ ಬಂದವರ ಪತ್ತೆಗೆ ಜಿಲ್ಲಾಡಳಿತ ಮುಂದಾಗಿದೆ. ಮದುವೆ ಮನೆಯವರನ್ನೂ ಸಂಪರ್ಕಿಸಿ ತಪಾಸಣೆ ಮಾಡಲು ನಿರ್ಧಾರ ಮಾಡಲಾಗಿದೆ. ಕಾಲೇಜು ಕ್ಯಾಂಪಸ್‌ನಲ್ಲೇ ಇರುವ ಸಭಾಭವನದಲ್ಲಿ ನಡೆದ ಮದುವೆಗೂ ಈಗ ಕಂಟಕ ಎದುರಾಗಿದೆ.
ಇದನ್ನೂ ಓದಿ: ಧಾರವಾಡದ SDM ಮೆಡಿಕಲ್ ಕಾಲೇಜಿನ 116 ವಿದ್ಯಾರ್ಥಿಗಳಿಗೆ ಕೊರೊನಾ: ಒಟ್ಟು ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆ