ಹುಬ್ಬಳ್ಳಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ಕಾನೂನು ವಿಶ್ವವಿದ್ಯಾಲಯದ ಧೋರಣೆಯನ್ನು ವಿರೋಧಿಸಿ ಕಾನೂನು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ನಾಳೆಯಿಂದ ಬೆಂಗಳೂರಿಗೆ ಶಿಫ್ಟ್ ಆಗಲಿದೆ.
ಮೂರು ಮತ್ತು ಐದನೇ ಸೆಮಿಸ್ಟರ್ ಕಾನೂನು ತರಗತಿ ಆರಂಭಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಎನ್‌ಎಸ್‌ಯುಐ ನೇತೃತ್ವದಲ್ಲಿ 250ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನವನಗರದ ಕಾನೂನು ವಿಶ್ವವಿದ್ಯಾಲಯದ ಎದುರು ಹಗಲಿರುಳು ಧರಣಿ ನಡೆಸಿ ಉಪಕುಲಪತಿಗೆ ಮನವಿ ಸಲ್ಲಿಸಿದ್ದರು. ಆದರೆ, ಕುಲಪತಿಗಳು ವಿದ್ಯಾರ್ಥಿಗಳ ಪ್ರತಿಭಟನೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ, ಪ್ರತಿಭಟನೆ ಬೆಂಗಳೂರಿಗೆ ಶಿಫ್ಟ್ ಆಗಲಿದೆ.
ನಾಳೆಯಿಂದ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಎನ್ಎಸ್ಐಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ವಿದ್ಯಾರ್ಥಿಗಳು ತೀರ್ಮಾನಿಸಿದ್ದಾರೆ. ಮೊದಲ ಮತ್ತು ಎರಡನೇ ವರ್ಷದ ಕಾನೂನು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಆಕ್ಟೋಬರ್‌ನಲ್ಲಿ ಮುಗಿದು, ಈ ತಿಂಗಳಲ್ಲಿ ಮುಂದಿನ ತರಗತಿಗಳು ಆರಂಭ ಆಗಬೇಕಿತ್ತು.
ಆದರೆ, ವಿಶ್ವವಿದ್ಯಾಲಯ ಪರೀಕ್ಷೆ ನಡೆಸದೆ, ಮುಂದಿನ ಸೆಮಿಸ್ಟರ್ ತರಗತಿಯನ್ನೂ ನಡೆಸದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಭೌತಿಕವಾಗಿ ಪರೀಕ್ಷೆ ನಡೆಸಬಾರದು. ಆನ್‌ಲೈನ್ ಅಥವಾ ಅಸೈನ್ಮೆಂಟ್ ಮಾದರಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ.
ಇದನ್ನೂ ಓದಿ: ಬಸ್ ನಿಲ್ಲಿಸುವ ವಿಚಾರಕ್ಕೆ ಪೊಲೀಸ್ ಕಾನ್ಸ್‌ಟೇಬಲ್-ಬಸ್ ನಿರ್ವಾಹಕನ ನಡುವೆ ಫೈಟಿಂಗ್