ಹುಬ್ಬಳ್ಳಿ: ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಕಂಬಗಳು ಉಳಿದಿದ್ರೆ, ಅವುಗಳನ್ನ ನೀವೇ ತೆಗೆದುಕೊಂಡು ಹೋಗಿ ಎಂದು ಸಚಿವ ಜಗದೀಶ್ ಶೆಟ್ಟರ್ ಉತ್ತರ ನೀಡಿದ್ದಾರೆ.
ಮೂರು ಸಾವಿರಮಠದ ಆಸ್ತಿ ವಿವಾದದ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮಠದ ಬಗ್ಗೆ ಪರಸ್ಪರ ಆಪಾದನೆ ಮಾಡುವುದನ್ನ ಬಿಟ್ಟು, ಮಠದ ಬಗ್ಗೆ ವಿಚಾರ ಮಾಡೋಣ. ದಿಂಗಾಲೇಶ್ವರ ಶ್ರೀಗಳ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಬಹಿರಂಗ ಚರ್ಚೆ ಮಾಡಿ ಮಠದ ಮರ್ಯಾದೆ ಇನ್ನೂ ನಾವು ತೆಗೆಯುತ್ತಿದ್ದೇವೆ. ಮೂರು ಸಾವಿರ ಮಠದ ವಿಚಾರವಾಗಿ ನಾನು ಬಹಿರಂಗ ಚರ್ಚೆ ಮಾಡಲು ಸಿದ್ದನಿಲ್ಲ ಎಂದರು.
ಸುಮ್ಮನೆ ಆರೋಪ ಮಾಡಿದ್ರೆ, ನಾನು ಜವಾಬ್ದಾರನಲ್ಲ. ಮಠದ ಆಸ್ತಿ ವಿವಾದವನ್ನು ನಾನೇ ಅಂತ್ಯ ಮಾಡಬೇಕಾ.. ಮಠದ ಉನ್ನತ ಮಟ್ಟದ ಸಮಿತಿಯಲ್ಲಿ ಇನ್ನೂ ಹಿರಿಯರು ಇದ್ದಾರೆ, ಅವರನ್ನ ಕೇಳಿ. ಹುಬ್ಬಳ್ಳಿಯಲ್ಲಿ ಯಾರಿಗಾದರೂ ನೆಗಡಿ, ಕೆಮ್ಮಿದ್ರೆ ಜಗದೀಶ್ ಶೆಟ್ಟರ್ ಕಾರಣನಾ? ಎಂದು ಮರು ಪ್ರಶ್ನೆ ಹಾಕಿದರು.
ಮಠದ ಉನ್ನತ ಸಮಿತಿ ಸದಸ್ಯರೇ ಹೀಗೆ ಮಾತಾನಾಡಿದ್ರೆ, ಮಠದ ಆಸ್ತಿ ಉಳಿಸುವವರು ಯಾರು ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದ್ದು, ಮಠದ ವಿವಾದ ಇನ್ನೂ ತಾರಕಕ್ಕೇರುವ ಲಕ್ಷಣ ಕಾಣುತ್ತಿವೆ.