ಹುಬ್ಬಳ್ಳಿ: ಯಾವುದೇ ಸರ್ಕಾರವಿದ್ದರೂ ರೈತರಿಗೆ ಪರಿಹಾರ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ನಮ್ಮ ರೈತ ಮೋರ್ಚಾ ರಾಜ್ಯಾದ್ಯಂತ ಪ್ರವಾಸ ನಡೆಸಿದೆ. ರೈತ ಮೋರ್ಚಾ ಅಧ್ಯಕ್ಷನಾಗಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ರಾಜ್ಯಸಭೆಯ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರೈತರ ಸಂಕಷ್ಟಗಳ ಬಗ್ಗೆ ಸಚಿವರ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು. ಇದರ ಜೊತೆಗೆ ಕೇಂದ್ರ ಸರ್ಕಾರ ಗೋವಿನ ಜೋಳಕ್ಕೆ 1,750 ರೂಪಾಯಿ ಬೆಂಬಲ ಬೆಲೆ ನೀಡಿದೆ ಎಂದು ಸ್ಪಷ್ಟನೆ ನೀಡಿದರು.
ಈಗಾಗಲೇ 1,750 ರುಪಾಯಿಗೆ ಕೆಎಂಎಫ್ನಿಂದ ಗೋವಿನಜೋಳ ಖರೀದಿಸಲಾಗಿದೆ. ಖರೀದಿ ಮಾಡಿ 3 ತಿಂಗಳಾದರೂ ರೈತರ ಖಾತೆಗೆ ಹಣ ಬಂದಿಲ್ಲ. ಈ ಬಗ್ಗೆ ಕೆಎಂಎಫ್ ಅಧ್ಯಕ್ಷರೊಂದಿಗೆ ಮಾತನಾಡುತ್ತೇನೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ನಾವು ಹೋರಾಟ ಮಾಡುವ ಅವಶ್ಯಕತೆ ಇಲ್ಲ. ರೈತರಿಗೆ ಎಲ್ಲಾ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಕಡಾಡಿ ಭರವಸೆ ನೀಡಿದರು.
ರಾಜ್ಯದಲ್ಲಿ ಯೂರಿಯಾ ಕೊರತೆ ವಿಚಾರವಾಗಿ ಮಾತನಾಡಿದ ಅವರು, ಕೊರೊನಾದಿಂದಾಗಿ ಕೇಂದ್ರ ಸರ್ಕಾರ ಯೂರಿಯಾ ಪೂರೈಸಲು ವಿಳಂಬವಾಗಿದೆ. ಆದಷ್ಟು ಶೀಘ್ರವಾಗಿ ರಾಜ್ಯ ಸರ್ಕಾರ ಯೂರಿಯಾ ಗೊಬ್ಬರ ಒದಗಿಸುವ ಕೆಲಸ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.