ಹುಬ್ಬಳ್ಳಿ: ಮಹಾರಾಷ್ಟ್ರಕ್ಕೆ ಸ್ಥಿರ ಸರ್ಕಾರ ಬೇಕಿತ್ತು. ಹೀಗಾಗಿ ಅತ್ಯಂತ ಅನಿವಾರ್ಯವಾಗಿ ಎನ್ಸಿಪಿಯೊಂದಿಗೆ ಸೇರಿ ಸರ್ಕಾರ ರಚಿಸಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಜನಾದೇಶ ನರೇಂದ್ರ ಮೋದಿ ಪರವಾಗಿದೆ. ಚುನಾವಣಾ ಪೂರ್ವ ಶಿವಸೇನೆ ಮತ್ತು ಬಿಜೆಪಿಗೆ ಬಹುಮತ ನೀಡಿದ್ದರು. ಆದರೆ, ಶಿವಸೇನೆಯವರು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದರು. ಶಿವಸೇನೆಯವರು ಅನೈತಿಕವಾಗಿ ಕಾಂಗ್ರೆಸ್ನೊಂದಿಗೆ ಸೇರಿ ಸರ್ಕಾರ ರಚನೆಗೆ ಮುಂದಾಗಿದ್ದರು. ಆದರೆ, ನಮ್ಮ ಜೊತೆ ಎನ್ಸಿಪಿ ಬೆಂಬಲ ನೀಡುವ ಮೂಲಕ ಸರ್ಕಾರ ರಚನೆಯಾಗಿದೆ.
ಸಂಜಯ್ ರಾವುತ್ ಎನ್ನುವಂತಹ ಒಬ್ಬ ದುರಂಹಕಾರಿ ಮನುಷ್ಯನಿಗೆ ಹಾಗೂ ಉದ್ಧವ್ ಠಾಕ್ರೆ ಎನ್ನುವಂತಹ ಅಧಿಕಾರದ ದುರಾಸೆಯ ವ್ಯಕ್ತಿಗೆ ಪಾಠ ಕಲಿಸಬೇಕಾದ ಅನಿವಾರ್ಯವಿತ್ತು. ಅದು ಆಗಿದೆ ಎಂದರು. ಇದು ಯಾವುದೇ ಪ್ರಜಾಪ್ರಭುತ್ವದ ಕಗ್ಗೋಲೆಯ ಅಲ್ಲ. ಅನೈತಿಕವೂ ಅಲ್ಲ. ಸಂವಿಧಾನ ಬದ್ಧವಾದ ಸರ್ಕಾರ ರಚನೆಯಾಗಿದೆ ಎಂದರು. ಫಡ್ನವೀಸ್ ಮತ್ತು ಅಜೀತ್ ಪವಾರ್ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡಲಿದೆ ಎಂಬ ವಿಶ್ವಾಸವಿದೆ ಎಂದರು.
ಬಿಜೆಪಿ ನಾಯಕರಿಗೆ ಮಾಜಿ ಸಚಿವ ಡಿಕೆಶಿ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಏನು ದಾಖಲೆ ನೀಡುತ್ತಾರೋ ಈಗಲೇ ನೀಡಲಿ. ಯಾರು ಬೇಡ ಅಂದವರು. ಈಗಲೇ ಉಪಚುನಾವಣೆ ನಡೆದಿದೆ. ದಾಖಲೆಗಳಿದ್ದರೆ ಈಗಲೇ ಬಹಿರಂಗಪಡಿಸಲಿ. ಡಿಕೆಶಿ ತಮ್ಮ ಮಗಳ ಬಳಿ ಕೋಟ್ಯಂತರ ಹಣ ಹೇಗೆ ಬಂತು ಎಂಬುದನ್ನ ಬಹಿರಂಗಪಡಿಸಲಿ ಎಂದರು.
ಮಹದಾಯಿ ಇತ್ಯರ್ಥ ವಿಚಾರವಾಗಿ ಡಿಕೆಶಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಈ ಮೊದಲು ಅವರದ್ದೇ ಸರ್ಕಾರ ಇದ್ದಾಗ ವಿರೋಧ ಮಾಡಿದ್ದರು. ಈ ಕುರಿತಂತೆ ಈಗಾಗಲೇ ಪರಿಸರ ಇಲಾಖೆ ಅನುಮತಿ ನೀಡಿದೆ. ಈಗ ಅದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಕಾಂಗ್ರೆಸ್ ಕೇವಲ ಚುನಾವಣಾ ಗಿಮಿಕ್ಗಾಗಿ ಈ ರೀತಿಯ ಆರೋಪ ಮಾಡುತ್ತಿದೆ ಎಂದರು.