ಹುಬ್ಬಳ್ಳಿ: ಸಿ.ಎಸ್ ಶಿವಳ್ಳಿಯವರ ಯಶಸ್ಸಿನ ಹಿಂದೆ ಕುಸುಮಾ ಶಿವಳ್ಳಿಯವರಿದ್ದಾರೆ. ಆದ್ದರಿಂದ ನಾವೇ ಒತ್ತಾಯ ಮಾಡಿ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಕುಸುಮಾ ಶಿವಳ್ಳಿಯವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.
ಕುಂದಗೋಳದ ಸಂಶಿಯಲ್ಲಿ ನಡೆದ ದೋಸ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ಐಟಿ ದಾಳಿಯಿಂದ ನನಗೆ ಏನೆಲ್ಲಾ ಸಮಸ್ಯೆಯಾಗಿದೆ ಎಂದು ನಿಮಗೆ ಗೊತ್ತು. ಆದರೂ ಕೋರ್ಟ್‌ನಿಂದ ಕಾಲಾವಕಾಶ ತೆಗೆದುಕೊಂಡು ನಾನೇ ಮುಂದೆ ನಿಂತು ಚುನಾವಣೆ ಮಾಡುತ್ತೇನೆ. ನಾನು ಮಂತ್ರಿಯಾಗಿ ಅಲ್ಲ, ಒಬ್ಬ ಕಾರ್ಯಕರ್ತನಾಗಿ ಕುಂದಗೋಳ ಚುನಾವಣೆ ಮಾಡುತ್ತೇನೆ. ಎಲ್ಲಾ ಬಿಜೆಪಿ ಮುಖಂಡರು ಶಿವಳ್ಳಿಯವರ ಜನಪರ ಕೆಲಸಗಳನ್ನು ಹೊಗಳಿದ್ದಾರೆ. ಅದಕ್ಕಾಗಿ ಜಗದೀಶ್ ಶೆಟ್ಟರ್, ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳುತ್ತಾ ಬಿಜೆಪಿ ಮತಬುಟ್ಟಿಗೆ ಕೈ ಹಾಕಿದರು.
ಕನಸಿನಿಂದ ಸರ್ಕಾರ ಕಟ್ಟಲು ಸಾಧ್ಯವಿಲ್ಲ :
ಶಿವಳ್ಳಿಯವರ ಜನಪರ ಸೇವೆಗೆ ನೀವು ಅಭಿಮಾನ ತೋರಿಸುತ್ತಿದ್ದೀರಿ. ಹೀಗಾಗಿ ಕುಸುಮಾ ಶಿವಳ್ಳಿಯವರನ್ನು ವಿಧಾನ ಸೌಧಕ್ಕೆ ಕಳುಹಿಸುವ ಜವಾಬ್ಧಾರಿ ಕುಂದಗೋಳ ಕ್ಷೇತ್ರದ ಜನರ ಮೇಲಿದೆ. ಕೆಲವು ಬಿಜೆಪಿ ಮುಖಂಡರು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಫೋನ್ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಬರುತ್ತೆ ಎಂದು ಹೇಳುತ್ತಿದ್ದಾರೆ. ಕನಸಿನಿಂದ ಸರ್ಕಾರ ಕಟ್ಟಲು ಸಾಧ್ಯವಿಲ್ಲ. ಕೇವಲ ಹಣಬಲದಿಂದ ಸರ್ಕಾರ ಕಟ್ಟಲು ಸಾಧ್ಯವಿಲ್ಲ. ಕುಂದಗೋಳ ಮತ್ತು ಚಿಂಚೋಳಿ ಚುನಾವಣೆ ಬಿಜೆಪಿಯವರಿಗೆ ಉತ್ತರವಾಗಬೇಕು ಎಂದರು.